ನವದೆಹಲಿ:ಬಿಜೆಪಿ ನಾಯಕರಿಂದ ಪ್ರವಾದಿ ಅವಹೇಳನ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾದ ಬಳಿಕ ಕತರ್ ರಾಯಭಾರ ಕಚೇರಿಗೆ ಅಲ್ಲಿನ ಆಡಳಿತ ಸಮನ್ಸ್ ನೀಡಿತ್ತು. ಇದೀಗ ಕುವೈಟ್ ಆಡಳಿತವೂ ಭಾರತೀಯ ರಾಯಭಾರಿ ಕಚೇರಿಗೆ ಸಮನ್ಸ್ ನೀಡಿದ್ದು, ಇದಕ್ಕೆ ಪ್ರತಿಯಾಗಿ ಕುವೈಟ್ ಭಾರತೀಯ ರಾಯಭಾರ ಕಚೇರಿ ಕತರ್ ರಾಯಭಾರ ಕಚೇರಿ ನೀಡಿದ ಉತ್ತರವನ್ನೇ ಪುನರುಚ್ಛರಿಸಿದೆ.
ಇದು ʼಕೆಲ ಸಣ್ಣ ಗುಂಪುಗಳ, ವ್ಯಕ್ತಿಗಳ ದೃಷ್ಟಿಕೋನವಷ್ಟೇʼ ಎಂದು ತನ್ನ ಉತ್ತರದಲ್ಲಿ ತಿಳಿಸಿದೆ.
"ಅವಹೇಳನಕಾರಿ ಟ್ವೀಟ್ ಗೂ ಭಾರತ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದು ಕೇವಲ ಸಣ್ಣ ಗುಂಪುಗಳ, ವ್ಯಕ್ತಿಗಳ ದೃಷ್ಟಿಕೋನವಷ್ಟೇ. ನಮ್ಮ ನಾಗರಿಕತೆಯ ಪರಂಪರೆ ಮತ್ತು ವಿವಿಧತೆಯಲ್ಲಿ ಏಕತೆಯ ಪ್ರಬಲ ಸಾಂಸ್ಕೃತಿಕ ಸಂಪ್ರದಾಯಗಳಿಗೆ ಅನುಗುಣವಾಗಿ ಭಾರತ ಸರಕಾರವು ಎಲ್ಲ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ. ಅವಮಾನಕಾರಿ ಹೇಳಿಕೆಗಳನ್ನು ನೀಡಿದವರ ವಿರುದ್ಧ ಈಗಾಗಲೇ ಕಠಿಣ ಕ್ರಮವನ್ನು ಕೈಗೊಳ್ಳಲಾಗಿದೆ" ಎಂದು ಉತ್ತರದಲ್ಲಿ ತಿಳಿಸಿದೆ.