ಜೈಪುರ: ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದ ರಾಜಸ್ಥಾನದ ಧೋಲ್ ಪುರ ಬಿಜೆಪಿ ಶಾಸಕಿ ಶೋಭಾರಾಣಿ ಕುಶ್ವಾಹ್ ಅವರನ್ನು ಬಿಜೆಪಿ ಮಂಗಳವಾರ ಪಕ್ಷದಿಂದ ಉಚ್ಚಾಟಿಸಿದೆ.
ಕುಶ್ವಾಹ್ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಮತ್ತು ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಅವರಿಗೆ ಮತಹಾಕುವ ಬದಲು ಕಾಂಗ್ರೆಸ್‌ನ ಪ್ರಮೋದ್ ತಿವಾರಿಗೆ ಅಡ್ಡ ಮತದಾನ ಮಾಡುವಂತೆ ಕೋರಿ ಸ್ವಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು.
ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ಅವರು ಶೋಭಾರಾಣಿ ಕುಶ್ವಾಹ್ ಅವರಿಗೆ ಪತ್ರ ಬರೆದಿದ್ದು, ಜೂನ್ 19 ರೊಳಗೆ ಸ್ಪಷ್ಟನೆ ನೀಡುವಂತೆ ಪಕ್ಷ ಶೋಕಾಸ್ ನೋಟಿಸ್ ನೀಡಿದೆ.
ಸುಭಾಷ್ ಚಂದ್ರ ಅವರು ಕೇವಲ ೩೦ ಮತಗಳನ್ನು ಪಡೆದುಕೊಳ್ಳುವ ಮೂಲಕ ಸೋತಿದ್ದರು. ಗೆಲ್ಲಲು ೧೧ ಮತಗಳು ಬೇಕಾಗಿತ್ತು. ಆದರೆ ಕುಶ್ವಾಹ್ ಅವರ ನಡೆ ಮಾತ್ರ ಬಿಜೆಪಿಗೆ ಮುಜುಗರಕ್ಕೀಡು ಮಾಡಿತ್ತು. ಅಡ್ಡ ಮತದಾನದ ನಂತರ ಅಮಾನತುಗೊಂಡ ಕುಶ್ವಾ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು, ಜೈಲಿನಲ್ಲಿರುವ ಪತಿಯನ್ನು ಉಲ್ಲೇಖಿಸಿದ ಅವರು ಬಿಜೆಪಿಯೇ ತನ್ನ ಕುಟುಂಬವನ್ನು ನಾಶಪಡಿಸಿದೆ ಎಂದು ಆರೋಪಿಸಿದ್ದರು.
ಕಾಂಗ್ರೆಸ್ ತನ್ನ ಮೂವರು ಅಭ್ಯರ್ಥಿಗಳಾದ ರಣದೀಪ್ ಸಿಂಗ್ ಸುರ್ಜೆವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಅವರನ್ನು ಯಶಸ್ವಿಯಾಗಿ ರಾಜ್ಯಸಭೆಗೆ ಆಯ್ಕೆ ಮಾಡಿತು. ಬಿಜೆಪಿಯ ಹಿರಿಯ ನಾಯಕ ಘನಶ್ಯಾಮ್ ತಿವಾರಿ ಕೂಡ ರಾಜಸ್ಥಾನದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದರು.