ಬದಿಯಡ್ಕ: ಕೇವಲ ಪದವಿ ಮಾತ್ರ ಪಡೆಯುವುದು ವಿದ್ಯಾಭ್ಯಾಸವಲ್ಲ. ನಮ್ಮ ಜ್ಞಾನವನ್ನು ಅಭಿವೃದ್ಧಿಗೊಳಿಸುತ್ತಾ ನಾವು ನಮ್ಮ ಕಾಲಮೇಲೆ ನಿಂತು ಇತರರನ್ನೂ ಸಬಲೀಕರಣಗೊಳಿಸುವ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಜ್ಞಾನವರ್ಧನೆಯ ಜೊತೆಗೆ ಸುಸಂಸ್ಕøತ ಬದುಕನ್ನು ರೂಪಿಸುವ ಎದೆಗಾರಿಕೆಯೂ ವಿದ್ಯಾರ್ಥಿಗಳಲ್ಲಿ ಬೆಳೆದುಬರಬೇಕು ಎಂದು ಬೆಂಗಳೂರು ಭಟ್ಸ್ ಬಯೋಟೆಕ್ ಸಂಸ್ಥೆಯ ಪ್ರಬಂಧಕ, ಹಿರಿಯ ನಾಗರಿಕರಿಗಾಗಿರುವ ಪುತ್ತೂರು `ನವಚೇತನ'ದ ರೂವಾರಿ, ಸಂಶೋಧಕ ಡಾ. ಶ್ಯಾಮ ಭಟ್ ಪೊಟ್ಟಿಪ್ಪಲ ತಿಳಿಸಿದರು.
ಆಶುಕವಿ ಪೊಟ್ಟಿಪ್ಪಲ ದಿ. ನಾರಾಯಣ ಭಟ್ಟರ ಸ್ಮರಣಾರ್ಥ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿ ಅವರು ಮಾತನಾಡಿದರು.
ವರ್ತಮಾನದಲ್ಲೂ ಎಷ್ಟೋಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟದಿಂದಾಗಿ ಉನ್ನತ ವ್ಯಾಸಂಗವನ್ನು ತೊರೆಯುವವರಿದ್ದಾರೆ. ಕೇವಲ ಅಂಕಗಳಿಯೊಂದೇ ನಮ್ಮ ಧ್ಯೇಯವೆಂಬಂತಹ ವಿದ್ಯಾಸಂಸ್ಥೆಗಳೂ ಅದೆಷ್ಟೋ ಇವೆ. ಆದರೆ ಜೀವನಮೌಲ್ಯಗಳನ್ನಾಧರಿಸಿದ ಜ್ಞಾನವರ್ಧನೆಯಿಂದ ಬದುಕಿಗೊಂದು ಗುರಿಯನ್ನು ತೋರಿಸುವ ವಿದ್ಯಾಭ್ಯಾಸ ನೀತಿಯನ್ನು ಇಲ್ಲಿ ಕಂಡುಕೊಂಡಿದ್ದೇನೆ. ಆದ್ದರಿಂದ ಬದಿಯಡ್ಕ ಪ್ರದೇಶದಲ್ಲಿ ಎಲ್ಲರಿಗೂ ಚಿರಪರಿಚಿತರಾದ ಆಶುಕವಿಯೆಂದೇ ಪ್ರಸಿದ್ಧಿಯನ್ನು ಪಡೆದ ಉತ್ತಮ ನಾಯಕತ್ವ ಗುಣವನ್ನೂ, ಸಂಘಟನಾ ಚಾತುರ್ಯವನ್ನು ಬೆಳೆಸಿಕೊಂಡಿರುವ ನನ್ನ ಅತ್ಯಂತ ಆತ್ಮೀಯ ಸ್ನೇಹಿತನ ನೆನಪಿನಲ್ಲಿ ಕೈಲಾದಷ್ಟು ವಿದ್ಯಾರ್ಥಿ ವೇತನವನ್ನು ನೀಡುತ್ತಿದ್ದೇನೆ ಎಂದರು.
ವಿದ್ಯಾರ್ಥಿಗಳಾದ ಶ್ರೀವತ್ಸ ಕರಿಂಬಿಲ ಹಾಗೂ ಅಂಜನಾ ಎಸ್. ಬಾಲನ್ ಪೆರ್ಲ ಇವರಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಸಭೆಯಲ್ಲಿ ಸವಿತಾ ಪೊಟ್ಟಿಪ್ಪಲ, ಡಾ. ವೆಂಕಟ ಗಿರೀಶ, ಡಾ. ವಾಣಿಶ್ರೀ, ಶಾಲಾ ಸಂಚಾಲಕ ಜಯಪ್ರಕಾಶ್ ಪಜಿಲ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ, ಭಟ್ ಬಯೋಟೆಕ್ ಸಂಸ್ಥೆಯ ಪವನ್ ಕುಮಾರ್, ಬದಿಯಡ್ಕ ಹಿರಿಯನಾಗರಿಕರ ವೇದಿಕೆಯ ಅಧ್ಯಕ್ಷ ಶಂಕರನಾರಾಯಣ ಭಟ್ ಸಂಪತ್ತಿಲ ಮೊದಲಾದವರು ಪಾಲ್ಗೊಂಡಿದ್ದರು.