ನವದೆಹಲಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ಹುದ್ದೆ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಂಡ ನಂತರ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಅವರ ಕುರಿತು ತಾವು ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯನ್ನು ಹಿಂಪಡೆದಿದ್ದಾರೆ.
ಟಿವಿ ಚರ್ಚೆಯೊಂದರಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಬೇಷರತ್ತಾಗಿ ಹಿಂಪಡೆದಿದ್ದು, ಯಾರೊಬ್ಬರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಲ್ಲ ಎಂದು ನೂಪುರ್ ಶರ್ಮಾ ಅವರು ಹೇಳಿದ್ದಾರೆ.
"ನಾನು ಕಳೆದ ಹಲವು ದಿನಗಳಿಂದ ಟಿವಿ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದೇನೆ, ಅಲ್ಲಿ ನಮ್ಮ ಮಹಾದೇವ(ಶಿವ)ನಿಗೆ ನಿರಂತರವಾಗಿ ಅವಮಾನ ಮತ್ತು ಅಗೌರವ ತೋರಲಾಗಿದೆ. ಇದು ಶಿವಲಿಂಗವಲ್ಲ, ಕಾರಂಜಿ ಎಂದು ಅಣಕಿಸಲಾಗುತ್ತಿದೆ. ಆದರೆ ಅದು ಶಿವಲಿಂಗವೂ ಸಹ ಆಗಿತ್ತು. ದೆಹಲಿಯ ರಸ್ತೆ ಬದಿಯ ಫಲಕಗಳು ಮತ್ತು ಕಂಬಗಳಿಗೆ ಹೋಲಿಸಿ ಅಪಹಾಸ್ಯ ಮಾಡಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ತಮ್ಮ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.
"ನನ್ನ ಮಾತುಗಳಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಅಥವಾ ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿದ್ದರೆ ನಾನು ಈ ಮೂಲಕ ನನ್ನ ಹೇಳಿಕೆಯನ್ನು ಬೇಷರತ್ತಾಗಿ ಹಿಂತೆಗೆದುಕೊಳ್ಳುತ್ತೇನೆ. ಯಾರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ" ಎಂದು ನೂಪುರ್ ಶರ್ಮಾ ಹೇಳಿದ್ದಾರೆ.
ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮತ್ತು ವಕ್ತಾರೆ ಹುದ್ದೆಯಿಂದ ಅಮಾನತುಗೊಳಸಲಾಗಿದೆ.
ಏನು ವಿಷಯ?
ಪಕ್ಷದಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಕೆಲ ದಿನಗಳ ಹಿಂದೆ ಟಿವಿ ವಾಹಿನಿಯೊಂದರ ಲೈವ್ ಡಿಬೇಟ್ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಇದಾದ ಬಳಿಕ ಹಲವು ಮುಸ್ಲಿಂ ಸಂಘಟನೆಗಳು ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತಿವೆ. ನೂಪುರ್ ಶರ್ಮಾ ಹೇಳಿಕೆಯ ನಂತರ ಕಾನ್ಪುರದಲ್ಲಿ ಹಿಂಸಾಚಾರ ಭುಗಿಲೆದ್ದ ಬಳಿಕ ಬಿಜೆಪಿ ಈ ಕಠಿಣ ನಿರ್ಧಾರ ಕೈಗೊಂಡಿದೆ.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೇಳಿದ್ದೇನು?
ಏತನ್ಮಧ್ಯೆ, ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಹೇಳಿಕೆಗಳ ವಿವಾದದ ನಡುವೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಯಾವುದೇ ಪಂಥ ಅಥವಾ ಧರ್ಮವನ್ನು ಅವಮಾನಿಸುವುದು ಪಕ್ಷದ ಸಿದ್ಧಾಂತಕಕ್ಕೆ ವಿರುದ್ಧವಾಗಿದೆ. ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ ಮತ್ತು ಯಾವುದೇ ಧಾರ್ಮಿಕ ವ್ಯಕ್ತಿತ್ವವನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ. ಬಿಜೆಪಿ ಅಂತಹ ವ್ಯಕ್ತಿಗಳನ್ನು ಅಥವಾ ಆಲೋಚನೆಗಳನ್ನು ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು.