ನಮಗೆ ಕಾಡುತ್ತಿರುವ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪ್ರಮುಖ ಕಾರಣ ಮಾನಸಿಕ ಒತ್ತಡವೇ ಆಗಿರುತ್ತದೆ. ಬಿಪಿ, ಶುಗರ್, ಖಿನ್ನತೆ ಹೀಗೆ ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ಮಾನಸಿಕ ಒತ್ತಡ. ಮಾನಸಿಕ ಒತ್ತಡ ನಮ್ಮ ಮನಸ್ಸು ಹಾಗೂ ದೇಹವನ್ನು ಬಳಲುವಂತೆ ಮಾಡುತ್ತದೆ.
ಹಾಗಂತ ಮಾನಸಿಕ ಒತ್ತಡ ಇಲ್ಲದವರು ಯಾರೂ ಇರಲ್ಲ, ಎಲ್ಲರಿಗೂ ಒಂದಲ್ಲಾ ಒಂದು ರೀತಿಯ ಮಾನಸಿಕ ಒತ್ತಡ ಇದ್ದೇ ಇರುತ್ತದೆ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರಲ್ಲೂ ಒಂದೊಂದು ಆತಂಕವಿರುತ್ತದೆ, ಇದರಿಂದಾಗಿ ಮಾನಸಿಕ ಒತ್ತಡ ಹೆಚ್ಚುವುದು. ಶಾಲಾ ಮಕ್ಕಳಾದರೆ ಮಾರ್ಕ್ಸ್ ಹೆಚ್ಚು ತೆಗೆಯಬೇಕೆಂಬ ಒತ್ತಡ, ನಂತರ ಕೆಲಸದ ಒತ್ತಡ, ಅದಾದ ಬಳಿಕ ಸಂಸಾರದ ಒತ್ತಡ ಹೀಗೆ ಸದಾ ಒತ್ತಡಗಳಿಂದ ತುಂಬಿರುವುದೇ ಜೀವನ...
ಒತ್ತಡವಿಲ್ಲದ ಬದುಕು ನನಗೆ ಬೇಕೆಂದರೆ ಅದು ಸಾಧ್ಯವೇ ಇಲ್ಲ, ಆದರೆ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ ನಮ್ಮ ಬದುಕನ್ನು ಸರಿದೂಗಿಸಿಕೊಂಡು ಹೋಗುವುದರಲ್ಲಿದೆ ನಮ್ಮ ಆರೋಗ್ಯದ ಗುಟ್ಟು. ಮಾನಸಿಕ ಒತ್ತಡ ಕಡಿಮೆ ಮಾಡಲು ನೀವು ದೊಡ್ಡದಾಗಿ ಏನೂ ಮಾಡಬೇಕಾಗಿಲ್ಲ. ಕೆಲವೊಂದು ಸರಳ ಟಿಪ್ಸ್ ಹೇಳಿದ್ದೇವೆ ಹಾಗೆ ಮಾಡಿ, ತುಂಬಾ ರಿಲ್ಯಾಕ್ಸ್ ಅನಿಸುವುದು, ಮೈಯಲ್ಲಿ ಲವಲವಿಕೆ ಮೂಡುವುದು:
1. ದೀರ್ಘ ಉಸಿರು ತೆಗೆದುಕೊಳ್ಳಿ ತುಂಬಾ ಕೋಪ ಬಂತು ಅಥವಾಈ ಬಗೆಯ ಮಾನಸಿಕ ಒತ್ತಡ ನನ್ನಿಂದ ಸಹಿಸಲು ಸಾಧ್ಯವೇ ಇಲ್ಲ ಎಂದು ಅನಿಸಿದಾಗ ನೀವು ಪ್ರತಿಕ್ರಿಯಿಸುವ ಮುನ್ನು ಒಂದು ಕಡೆ ನಿಂತು ದೀರ್ಘವಾದ ಉಸಿರನ್ನು ತೆಗೆದುಕೊಳ್ಳಿ. ದೀರ್ಘವಾದ ಉಸಿರನ್ನು ನಿಧಾನಕ್ಕೆ ತೆಗೆದುಕೊಂಡು ನಿಧಾನಕ್ಕೆ ಬಿಡಿ. ಹೀಗೆ ಒಂದು 5 ಬಾರಿ ಮಾಡಿ ಕ್ಷಣಾರ್ಧದಲ್ಲಿ ನಿಮ್ಮ ಟೆನ್ಷನ್ ಅಥವಾ ಕೋಪ ದೂರಾಗದಿದ್ದರೆ ಮತ್ತೆ ಕೇಳಿ.
2. ಬಾಲಾಸನ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತೊಂದು ಅತ್ಯುತ್ತಮವಾದ ಟಿಪ್ಸ್ ಅಂದರೆ ಬಾಲಾಸನ ಅಥವಾ ಚೈಲ್ಡ್ ಪೋಸ್. ಯೋಗದಲ್ಲಿ ಈ ಭಂಗಿಯಿದೆ, ಯೋಗ ಗೊತ್ತಿಲ್ಲದಿದ್ದರೆ ಮಗು ಮಲಗುವಂತೆ ಕಮುಚಿ ಮಲಗು, ಕಾಲುಗಳನ್ನು ಮಡಚಿ ನಿಧಾನಕ್ಕೆ ಬಾಗಿ ಕೈಗಳನ್ನು ಮುಂದೆ ಚಾಚಿ ವಿಶ್ರಾಂತಿಯನ್ನು ಪಡೆಯಿರಿ. ಈ ಭಂಗಿಯಲ್ಲಿ 5 ನಿಮಿಷ ಮಲಗಿದರೆ ಸಾಕು ಮಾನಸಿಕ ಒತ್ತಡ ಕಡಿಮೆಯಾಗುವುದು.
3. ನೀರು ಕುಡಿಯಿರಿ ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದ ನಿಮಗೆ ಒಂದು ಕಡೆ ಕೂರಬೇಕು, ಚೀರವೇಕು ಎಂದೆಲ್ಲಾ ಅನಿಸಬಹುದು, ಆದರೆ ಹಾಗೇನೂ ಮಾಡಲು ಹೋಗಬೇಡಿ, ಬದಲಿಗೆ ಒಂದು ಲೋಟ ನೀರು ತೆಗೆದು ಕುಡಿಯಿರಿ. ಅದು ಗಟ ಗಟನೆ ಕುಡಿಯಬೇಡಿ, ಸಿಪ್ ಬೈ ಸಿಪ್ ತೆಗೆದುಕೊಳ್ಳಿ, ಒಂದು ಲೋಟ ನೀರು ಕುಡಿದು ಮುಗಿಸುವಷ್ಟರಲ್ಲಿ ಆ ಟೆನ್ಷನ್ ತುಂಬಾನೇ ಕಡಿಮೆಯಾಗಿರುತ್ತದೆ.
4. ಸಂಗೀತವನ್ನು ಆಲಿಸಿ ನೀವು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ಯಾವ ಕಾರಣದಿಂದ ನಿಮಗೆ ಹಾಗಾಯ್ತೋ ಅದರ ಬಗ್ಗೆ ಯೋಚಿಸಿದೆ ನಿಮ್ಮ ಇಷ್ಟದ ಸಂಗೀತವನ್ನು ಆಲಿಸಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುವುದು, ಮಾನಸಿಕ ಒತ್ತಡವೂ ಕಡಿಮೆಯಾಗುವುದು.
5. ಇತರೆ ಟಿಪ್ಸ್ ಪ್ರತಿದಿನ ನಿಮ್ಮ ಜೀವನಶೈಲಿಯಲ್ಲಿ ಪ್ರಾಣಯಾಮ, ಧ್ಯಾನವನ್ನು ಸೇರಿಸಿಕೊಳ್ಳಿ. ಇದರಿಂದ ನೀವು ಸಾಕಷ್ಟು ಮಾನಸಿಕ ಹಾಗೂ ದೈಹಿಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
6. ಮಾನಸಿಕ ಒತ್ತಡ ನಿರ್ಲಕ್ಷ್ಯ ಮಾಡಬೇಡಿ ನೀವು ತುಂಬಾ ಮಾನಸಿಕ ಒತ್ತಡ ಅನುಭವಿಸಿದಾಗ ನಿಮ್ಮ ಮನಸ್ಸಿನ ಸ್ಥಿತಿ ನಿಮಗೇ ಅರ್ಥವಾಗುತ್ತದೆ. ನಿಮ್ಮ ದೇಹದ ಬಗ್ಗೆ ನೀವು ಆರೈಕೆ ಮಾಡಬೇಕು. ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾದಾಗ ನೀವು ಮೊದಲು ಅದನ್ನು ಹೋಗಲಾಡಿಸುವತ್ತ ಗಮನ ಹರಿಸಬೇಕು. ಮೇಲೆ ನೀಡಿರುವ ಟಿಪ್ಸ್ ಟ್ರೈ ಮಾಡಿ, ಆರೋಗ್ಯವೇ ಭಾಗ್ಯ ಎಂಬುವುದನ್ನು ಮರೆಯದಿರಿ.