ವಾಟ್ಸ್ಯಾಪ್ ಸದ್ಯದಲ್ಲಿಯೇ ಎಡಿಟ್ ಬಟನ್ ಹೊಂದಲಿದೆ ಎನ್ನಲಾಗಿದ್ದು ಒಮ್ಮೆ ಕಳುಹಿಸಿದ ಸಂದೇಶವನ್ನು ಕಳುಹಿಸಿದವರಿಗೆ ಅದನ್ನು ಎಡಿಟ್ ಮಾಡುವ ಅವಕಾಶವನ್ನು ಈ ಬಟನ್ ಒದಗಿಸಲಿದೆ ಎಂದು ತಿಳಿದು ಬಂದಿದೆ.
ವಾಟ್ಸ್ಯಾಪ್‍ನ ಬೀಟಾ ಆವೃತ್ತಿಯಲ್ಲಿ ಪ್ರಸ್ತುತ ಈ ಬಟನ್ ಅನ್ನು ಪರೀಕ್ಷಿಸಲಾಗುತ್ತಿದೆ ಎಂಬ ಮಾಹಿತಿಯಿದೆ.
ಬೀಟಾ ಆವೃತ್ತಿ ಹೊಂದಿದವರಿಗೆ ನೂತನ ಅಪ್ಡೇಟ್ ಗಳನ್ನು ಮೊದಲೇ ಪರಿಶೀಲಿಸುವ ಅವಕಾಶ ದೊರಕುತ್ತದೆ.
ಸದ್ಯ ವಾಟ್ಸ್ಯಾಪ್ ಮೂಲಕ ಕಳುಹಿಸಲಾದ ಸಂದೇಶವನ್ನು ಡಿಲೀಟ್ ಮಾಡುವ ಆಯ್ಕೆ ಇದೆಯಾದರೂ ಎಡಿಟ್ ಮಾಡುವ ಆಯ್ಕೆಯನ್ನು ವಾಟ್ಸ್ಯಾಪ್ ಹೊಂದಿಲ್ಲ.
ಈ ಎಡಿಟ್ ಬಟನ್ ವೈಶಿಷ್ಟ್ಯದ ಮೇಲೆ ವಾಟ್ಸ್ಯಾಪ್ ಐದು ವರ್ಷಗಳ ಹಿಂದೆಯೇ ಗಮನಹರಿಸಲು ಆರಂಭಿಸಿದ್ದರೂ ಟ್ವಿಟ್ಟರ್‍ನಲ್ಲಿ ಈ ಕುರಿತು ವರದಿ ಬಂದ ಬೆನ್ನಿಗೇ ಅದನ್ನು ಕೈಬಿಟ್ಟಿತ್ತು. ಈಗ ಐದು ವರ್ಷಗಳ ನಂತರ ಮತ್ತೆ ಎಡಿಟ್ ಬಟನ್ ಕುರಿತು ವಾಟ್ಸ್ಯಾಪ್ ಪರೀಕ್ಷಿಸುತ್ತಿದೆ.
ಎಡಿಟ್ ಬಟನ್ ಆಯ್ಕೆ ಮಾಡಿದ ಬಳಕೆದಾರರ ಕಾಗುಣಿತ ತಪ್ಪನ್ನು ಅಥವಾ ಸಂದೇಶದಲ್ಲಿನ ಇತರ ಯಾವುದೇ ಅಂಶವನ್ನು ಅದನ್ನು ಕಳುಹಿಸಿದ ನಂತರವೂ ಸರಿಪಡಿಸಬಹುದಾಗಿದೆ ಎಂದು ವರದಿಗಳು ತಿಳಿಸಿವೆ.