ಕಾಸರಗೋಡು: ಸಂಘ ಸಂಸ್ಥೆಗಳು ಪರಿಸರ ಸಂರಕ್ಷಣೆ ಕಾಳಜಿಯೊಂದಿಗೆ ಸಾಮಾಜಿಕ ಬದ್ಧತೆ ಕಾಪಾಡಿಕೊಳ್ಳುವುದು ಅನಿವಾರ್ಯ ಎಂದು ಪ್ರಗತಿಪರ ಕೃಷಿಕ, ವೈದ್ಯ ಡಾ. ಕೃಷ್ಣಮೋಹನ ತಿಳಿಸಿದ್ದಾರೆ. ಅವರು ರಾಯಲ್ ಟ್ರಾವೆಂಕೂರ್ ಪೆರ್ಲ ಶಾಖೆಯಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸಸಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಣಕಾಸು ಸಂಸ್ಥೆಯೊಂದು ಪರಿಸರದ ಬಗ್ಗೆ ಕಾಳಜಿ ವಹಿಸಿ, ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಈ ಸಂದರ್ಭ ಬ್ಯಾಂಕಿನ ಗ್ರಾಹಕರಿಗೆ ಹಾಗೂ ಇತರರಿಗೆ ವಿವಿಧ ಸಸಿಗಳನ್ನು ವಿತರಿಸಲಾಯಿತು. ಬ್ಯಾಂಕಿನ ಸಹಾಯಕ ಪ್ರಬಂಧಕ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಸಿಬ್ಬಂದಿ ಅಕ್ಷಿತಾ ಸ್ವಾಗತಿಸಿದರು. ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು. ಅವಿನಾಶ್ ವಂದಿಸಿದರು. ದೀಕ್ಷಿತ್, ಚಂಪಾವತಿ ಹಾಗೂ ವಿದ್ಯಾಕುಮಾರಿ ಕಾರ್ಯಕ್ರಮ ಸಂಯೋಜಿಸಿದರು.