ಕುಂಬಳೆ: ನಾಡಿನ ಗ್ರಂಥಾಲಯ ಮತ್ತು ವಾಚನಾಲಯಗಳಿಗೆ ಕಣಿಪುರ ಮಾಸಪತ್ರಿಕೆ ತಲುಪಿಸುವ ಅಭಿಯಾನ ಬಾಯಾರು ಮುಳಿಗದ್ದೆಯ ಹೆದ್ದಾರಿ ಶಾಲಾ ಮಿತ್ರಮಂಡಳಿಯ ಗ್ರಂಥಾಲಯದಲ್ಲಿ ಉದ್ಘಾಟನೆಗೊಂಡು ಚಾಲನೆ ಪಡೆಯಿತು.
ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹ್ಮದ್ ಹುಸೇನ್ ಮಾಸ್ತರ್ ಅಭಿಯಾನ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಗಡಿನಾಡು ಕಾಸರಗೋಡಿನ ನೆಲದಿಂದ ಸದ್ದಿಲ್ಲದೇ ಪ್ರಕಟಣೆಯ ಹತ್ತು ವರ್ಷ ದಾಟುತ್ತಿರುವ ಕಣಿಪುರ ಇಂದು ಯಕ್ಷಕಲಾ ವಲಯದಲ್ಲಿ ಪ್ರಬುದ್ಧತೆಯ, ಗೌರವದ ಜನಪ್ರಿಯ ಪತ್ರಿಕೆ. ಇದರ ಪ್ರೌಢತೆಯ ಕಲಾಕೊಡುಗೆ, ಸಾಧನೆ ಶ್ಲಾಘನೀಯ. ನಾಡಿನ ಎಲ್ಲಾ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಕಲಾತ್ಮಕ ವೈಚಾರಿಕ ನೆಲೆಗಟ್ಟಿನ ಮಾಸಪತ್ರಿಕೆಯನ್ನು ಓದಿ ಪ್ರೋತ್ಸಾಹಿಸಬೇಕಾದುದು ನಮ್ಮ ಸಾಂಸ್ಕøತಿಕ ಬದ್ಧತೆ ಎಂದರು.
ಮುಳಿಗದ್ದೆ ಹೆದ್ದಾರಿ ಶಾಲಾ ಶಿಕ್ಷಕಿ ಹಾಗೂ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯೆ ಮಮತಾ ಡಿ ಮತ್ತು ಶಾಲಾ ಪ್ರಬಂಧಕ ರಾಜೇಶ್ ಭಟ್ ಎನ್ ಪ್ರಾಯೋಜಕತ್ವದಲ್ಲಿ ಮುಳಿಗದ್ದೆ ಮಿತ್ರಮಂಡಳಿ ಗ್ರಂಥಾಲಯಕ್ಕೆ ಕಣಿಪುರ ಮಾಸಪತ್ರಿಕೆಯನ್ನು ಪ್ರಾಯೋಜಿಸಲಾಗಿದೆ. ಅಧ್ಯಾಪಕಿ ಮಮತಾ ಅವರಿಗೆ ಸಂಚಿಕೆಗಳನ್ನು ಹಸ್ತಾಂತರಿಸುವ ಮೂಲಕ ಅಭಿಯಾನ ಉದ್ಘಾಟಿಸಲ್ಪಟ್ಟಿತು. ಹೆದ್ದಾರಿ ಶಾಲಾ ಮುಖ್ಯೋಪಾಧ್ಯಾಯ, ಮಿತ್ರಮಂಡಳಿ ಅಧ್ಯಕ್ಷ ಆದಿನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕಿ ಸೌಮ್ಯ ಬಿ. ಉಪಸ್ಥಿತರಿದ್ದರು. ಗ್ರಂಥಾಲಯ ಕಾರ್ಯದರ್ಶಿ ಗೀತಾ ಕೆ ಸ್ವಾಗತಿಸಿದರು.
ಕಣಿಪುರ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅತಿಥಿಯಾಗಿ ಪಾಲ್ಗೊಂಡು ಕಾಸರಗೋಡು ಮತ್ತು ಕರ್ನಾಟಕ ರಾಜ್ಯ ವ್ಯಾಪಕ ನಡೆಯುವ ಅಭಿಯಾನಕ್ಕೆ ಯಕ್ಷಗಾನದ ಗಂಡುಮೆಟ್ಟಿನ ನೆಲ ಬಾಯಾರಿನಿಂದ ಚಾಲನೆ ದೊರೆಯುತ್ತಿರುವುದು ಅಭಿಮಾನದ ವಿಷಯ. ಗ್ರಂಥಾಲಯ ಮತ್ತು ವಾಚನಾಲಯಗಳು ಮರಳಿ ಸಕ್ರಿಯತೆ ಪಡೆದು ಕಲಾಸಾಹಿತ್ಯ ವಿಚಾರಗಳ ಓದು, ಸಂವಾದಗಳ ವೇದಿಕೆಯಾಗಬೇಕು. ಕಲಾಸಾಹಿತ್ಯ ಪ್ರಕಾಶನಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಗ್ರಂಥಪಾಲಕಿ ನಯನ ವಂದಿಸಿದರು.