HEALTH TIPS

ಕೊರೊನಾ ಪ್ರಕರಣ ಏರಿಕೆ ಹೊಸ ಅಲೆ ಮುನ್ಸೂಚನೆ ಅಲ್ಲ: ದೇಶದಲ್ಲಿ ವೈರಸ್​ನ ಹೊಸ ಪ್ರಭೇದ ಪತ್ತೆಯಾಗಿಲ್ಲ..

 ನವದೆಹಲಿ: ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಸತತ ಏರಿಕೆ ದಾಖಲಾಗುತ್ತಿದ್ದರೂ ಕಳವಳ ಪಡಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದು ಹೊಸ ಅಲೆಯ ಸುಳಿವಾಗಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಉದ್ಭವಿಸಿರುವ ಆತಂಕದಲ್ಲಿ ಯಾವುದೇ ಹುರುಳಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಕೊರೊನಾ ವೈರಸ್​ನ ಹೊಸ ಪ್ರಭೇದ ಪತ್ತೆಯಾಗಿಲ್ಲ. ಅಲ್ಲದೆ ಪ್ರಕರಣಗಳ ಏರಿಕೆ ಕೆಲವು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ. ಆದ್ದರಿಂದ ಆತಂಕಪಡಬೇಕಿಲ್ಲ ಎಂದು ತಜ್ಞರು ಅಭಯ ನೀಡಿದ್ದಾರೆ. ಜನರು ಕೋವಿಡ್ ನಿಯಂತ್ರಣ ಕ್ರಮಗಳನ್ನು ಅನುಸರಿಸದಿರುವುದು ಮತ್ತು ಬೂಸ್ಟರ್ ಡೋಸ್ ಪಡೆಯಲು ಆಸಕ್ತಿ ತೋರದಿರುವುದರಿಂದ ಸೋಂಕಿನ ಕೇಸ್​ಗಳು ಕೆಲವು ಕಡೆಗಳಲ್ಲಿ ಹೆಚ್ಚಿರುವ ಸಾಧ್ಯತೆಯಿದೆ ಎಂದಿದ್ದಾರೆ. ಕೋವಿಡ್ ಸೋಂಕಿಗೆ ಕಾರಣವಾಗುವ ವೈರಸ್​ನ ಯಾವುದೇ ಕಳವಳಕಾರಿ ಹೊಸ ಪ್ರಭೇದ ಪತ್ತೆಯಾಗದಿರುವುದು ಮಹತ್ವದ ಸಂಗತಿಯಾಗಿದೆ ಎಂದು ರಾಷ್ಟ್ರೀಯ ಲಸಿಕೆ ಕುರಿತ ತಾಂತ್ರಿಕ ಸಲಹಾ ಗುಂಪಿನ (ಎನ್​ಟಿಎಜಿಐ) ಅಧ್ಯಕ್ಷ ಎನ್.ಕೆ. ಅರೋರಾ ಹೇಳಿದ್ದಾರೆ. ಹೆಚ್ಚು ಜನಸಾಂದ್ರತೆಯಿರುವ ಮೆಟ್ರೋ ಮತ್ತು ದೊಡ್ಡ ನಗರಗಳಿಗೆ ಸೋಂಕು ಸೀಮಿತವಾಗಿದೆ ಎಂದಿದ್ದಾರೆ. ಕೇರಳದ ಏಳು ಹಾಗೂ ಮಿಜೋರಂನ ಐದು ಜಿಲ್ಲೆಗಳ ಸಹಿತ ದೇಶದ 17 ಜಿಲ್ಲೆಗಳಿಂದ ಸಾಪ್ತಾಹಿಕ ಶೇಕಡ 10ಕ್ಕಿಂತ ಹೆಚ್ಚಿನ ಕೇಸ್​ಗಳು ವರದಿಯಾಗುತ್ತಿವೆ. ಕೇರಳದ ಏಳು, ಮಹಾರಾಷ್ಟ್ರ ಮತ್ತು ಮಿಜೋರಂನ ತಲಾ ನಾಲ್ಕು ಜಿಲ್ಲೆಗಳ ಸಹಿತ 24 ಜಿಲ್ಲೆಗಳಲ್ಲಿ ಸಾಪ್ತಾಹಿಕ ಪಾಸಿಟಿವಿಟಿ ದರ ಶೇಕಡ 5ರಿಂದ 10ರ ನಡುವೆ ಇದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಆರ್ಥಿಕ ಚೇತರಿಕೆ: ಕೋವಿಡ್ ಸೋಂಕಿನ ಮೂರು ಅಲೆಗಳನ್ನು ಎದುರಿಸಿದ ಹೊರತಾಗಿಯೂ ಭಾರತದ ಆರ್ಥಿಕತೆ ಚೇತರಿಸಿಕೊಂಡಿದೆ ಎಂದು ಅಮೆರಿಕದ ಆರ್ಥಿಕ ಸಚಿವಾಲಯದ ವರದಿಯೊಂದು ಅಭಿಪ್ರಾಯ ಪಟ್ಟಿದೆ. ಸಂಸತ್ತಿಗೆ (ಕಾಂಗ್ರೆಸ್) ಈ ವರದಿಯನ್ನು ಸಲ್ಲಿಸಲಾಗಿದೆ. 2021ರ ಮಧ್ಯಭಾಗದಲ್ಲಿ ಅಪ್ಪಳಿಸಿದ ಭೀಕರ ಅಲೆಯಿಂದಾಗಿ ಚೇತರಿಕೆ ವಿಳಂಬಗೊಂಡಿತ್ತು. ಆದರೆ, ಲಸಿಕೆ ಅಭಿಯಾನ ಆರಂಭವಾದ ನಂತರ ವರ್ಷದ ದ್ವಿತೀಯಾರ್ಧದಲ್ಲಿ ಆರ್ಥಿಕತೆ ಪುಟಿದೆದ್ದಿದೆ ಎಂದು ವರದಿ ಹೇಳಿದೆ. 2022ರ ಆರಂಭದಿಂದ ಒಮಿಕ್ರಾನ್ ರೂಪಾಂತರಿಯಿಂದಾಗಿ ಭಾರತ ಮೂರನೇ ದೊಡ್ಡ ಅಲೆಯನ್ನು ಎದುರಿಸಿತ್ತು. ಆದರೆ ಅದರಿಂದ ಹೆಚ್ಚಿನ ಸಾವುಗಳು ಸಂಭವಿಸಲಿಲ್ಲ ಹಾಗೂ ಆರ್ಥಿಕ ಪರಿಣಾಮವೂ ಸೀಮಿತವಾಗಿತ್ತು ಎಂದು ವರದಿ ನಮೂದಿಸಿದೆ.

40 ಸಾವಿರ ಸಕ್ರಿಯ ಕೇಸ್: ಶನಿವಾರ ಭಾರತದಲ್ಲಿ ಕೋವಿಡ್ ಸೋಂಕಿನ 8,329 ಹೊಸ ಕೇಸ್​ಗಳು ವರದಿಯಾಗಿವೆ, 10 ರೋಗಿಗಳು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿತರ ಒಟ್ಟು ಸಂಖ್ಯೆ 4,32,13,435 ಹಾಗೂ ಮೃತರ ಸಂಖ್ಯೆ 5,24,757ಕ್ಕೆ ಏರಿದೆ.

ಪ್ರಾಣಿಗಳಿಗೂ ಕೋವಿಡ್ ಲಸಿಕೆ: ಪ್ರಾಣಿಗಳಿಗೆ ನೀಡುವಂಥ ಕೋವಿಡ್ ತಡೆ ಲಸಿಕೆಯನ್ನು ಕೇಂದ್ರ ಕೃಷಿ ಸಚಿವಾಲಯ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಅಭಿವೃದ್ಧಿ ಪಡಿಸಲಾದ ಈ ಬಗೆಯ ಮೊದಲ ಲಸಿಕೆಯಾಗಿದೆ. ನಾಯಿ, ಬೆಕ್ಕು, ನರಿ ಮತ್ತು ಮುಂಗುಸಿಯಂಥ ಪ್ರಾಣಿಗಳಿಗೆ (ಮಿಂಕ್) ನೀಡುವ ಲಸಿಕೆಯನ್ನು ತಯಾರಿಸಿದ್ದಾಗಿ ರಷ್ಯಾ ಕಳೆದ ವರ್ಷವೇ ಹೇಳಿತ್ತು.

ಅಂಕೊವ್ಯಾಕ್ಸ್: ಹಿಸ್ಸಾರ್​ನ ರಾಷ್ಟ್ರೀಯ ಕುದುರೆ ಸಂಶೋಧನಾ ಕೇಂದ್ರ ಅಭಿವೃದ್ಧಿಪಡಿಸಿರುವ ಲಸಿಕೆಗೆ ಅಂಕೊವ್ಯಾಕ್ಸ್ ಎಂದು ಹೆಸರಿಡಲಾಗಿದೆ.

ಯಾವ್ಯಾವ ಪ್ರಾಣಿಗಳಿಗೆ ಲಸಿಕೆ?: ನಾಯಿ, ಸಿಂಹ, ಚಿರತೆ, ಇಲಿ ಮತ್ತು ಮೊಲಗಳಿಗೆ ಅಂಕೊವ್ಯಾಕ್ಸ್ ಲಸಿಕೆ ಹಾಕಬಹುದು. ಡೆಲ್ಟಾ ಪ್ರಭೇದದ ಸೋಂಕಿನ ಭಾಗವನ್ನು ಬಳಸಿ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ರೋಗನಿರೋಧಕ ಶಕ್ತಿ ಅಧಿಕವಾಗಿ ಪ್ರಚೋದಿಸಲು ಅಲ್​ಹೈಡ್ರೋಜೆಲ್ ಬಳಸಲಾಗುತ್ತದೆ.

ಮೃಗಾಲಯಗಳಲ್ಲಿ ರಕ್ಷಣೆ: ನಾಯಿ ಮತ್ತು ಬೆಕ್ಕುಗಳ ಸಹಿತ ಕೆಲವು ಪ್ರಾಣಿಗಳಲ್ಲಿ ಕೋವಿಡ್ ಸೋಂಕು ಇದೆಯೆಂಬ ವರದಿಗಳ ಹಿನ್ನೆಲೆಯಲ್ಲಿ ಈ ಲಸಿಕೆಗೆ ಮಹತ್ವವಿದೆ. ಈ ವ್ಯಾಕ್ಸಿನ್ ಮೃಗಾಲಯಗಳಲ್ಲಿನ ಪ್ರಾಣಿಗಳಿಗೆ ರಕ್ಷಣೆ ನೀಡಬಲ್ಲದಾಗಿದೆ. ಚಿಂಪಾಜಿಗಳಿಂದ ಮಾನವರಿಗೆ ಸೋಂಕು ಹರಡುವುದನ್ನು ಅದು ತಡೆಯಬಲ್ಲದು ಎಂದು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಜ್ಯೋತಿ ಮಿಸ್ರಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries