ನವದೆಹಲಿ: ಇದೀಗ ಪಕ್ಷದಿಂದ ಉಚ್ಛಾಟನೆಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ನೀಡಿದ ಹೇಳಿಕೆಗಳಿಗೆ ಕತಾರ್, ಕುವೈತ್ ಮತ್ತು ಇರಾನ್ ಆಡಳಿತಗಳು ಅಲ್ಲಿನ ಭಾರತೀಯ ರಾಯಭಾರಿಗಳನ್ನು ಕರೆಸಿ ತಮ್ಮ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ ಬೆನ್ನಿಗೇ ಗಲ್ಫ್ ಸಹಕಾರ ಮಂಡಳಿ ಕೂಡ ನೂಪುರ್ ಶರ್ಮ ಹೇಳಿಕೆಯನ್ನು ಖಂಡಿಸಿದೆ.
ತನ್ನ ಆರು ಸದಸ್ಯ ರಾಷ್ಟ್ರಗಳಾದ ಕುವೈತ್, ಒಮಾನ್, ಬಹರೈನ್, ಯುಎಇ, ಕತರ್ ಮತ್ತು ಸೌದಿ ಅರೇಬಿಯಾ ಪರವಾಗಿ ಗಲ್ಫ್ ಸಹಕಾರ ಮಂಡಳಿ ಹೇಳಿಕೆ ನೀಡಿದೆ. "ಗಲ್ಫ್ ಸಹಕಾರ ಮಂಡಳಿಯ ಮಹಾ ಕಾರ್ಯದರ್ಶಿ ಡಾ ನಯೇಫ್ ಫಲಾಹ್ ಎಂ ಅಲ್ ಹಜ್ರಫ್ ಅವರು ಪ್ರವಾದಿಯ ವಿರುದ್ಧ ಭಾರತದ ಬಿಜೆಪಿ ವಕ್ತಾರೆ ನೀಡಿದ ಹೇಳಿಕೆಯನ್ನು ಖಂಡಿಸುತ್ತದೆ ಹಾಗೂ ತಿರಸ್ಕರಿಸುತ್ತದೆ," ಎಂದು ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಂಡಳಿಯು ಎಲ್ಲಾ ಪ್ರವಾದಿಗಳು, ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ಚಿಹ್ನೆಗಳ ವಿರುದ್ಧದ ಹೇಳಿಕೆಗಳನ್ನೂ ಖಂಡಿಸುತ್ತದೆ ಹಾಗೂ ಪ್ರಚೋದನಕಾರಿ ಹೇಳಿಕೆಗಳು ಮತ್ತು ನಂಬಿಕೆಗಳು ಮತ್ತು ಧರ್ಮಗಳನ್ನು ಗೌಣವಾಗಿಸುವುದನ್ನು ವಿರೋಧಿಸುತ್ತದೆ,''ಎಂದು ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮುಸ್ಲಿಮರ ಪ್ರಾಚೀನ ಶಿಕ್ಷಣ ಕೇಂದ್ರವೆಂದೇ ತಿಳಿಯಲಾದ ಈಜಿಪ್ಟ್ ನ ಅಲ್-ಅಝರ್ ಅಲ್-ಶರೀಫ್ ಹೇಳಿಕೆ ನೀಡಿ ಬಿಜೆಪಿ ನಾಯಕರ ಹೇಳಿಕೆಯನ್ನು ಖಂಡಿಸಿದೆಯಲ್ಲದೆ ಈ ಹೇಳಿಕೆಗಳು ಹಾಸ್ಯಾಸ್ಪದವಾಗಿವೆ ಹಾಗೂ ಇಸ್ಲಾಂ ಮತ್ತು ಮುಸ್ಲಿಂ ದ್ವೇಷಿಗಳು ಆಗಾಗ ನೀಡುವ ಹೇಳಿಕೆಗಳಾಗಿವೆ ಎಂದು ಹೇಳಿದೆ.
ʼಅಜ್ಞಾನಿ ಭಾರತೀಯ'ನ ಹೇಳಿಕೆಯು ತೀವ್ರಗಾಮಿತ್ವ ಹಾಗೂ ದ್ವೇಷದ ಬೆಂಬಲಿಗರು ಹಾಗೂ ವಿವಿಧ ಧರ್ಮಗಳು, ನಾಗರಿಕತೆಗಳು ಮತ್ತು ಸಂಸ್ಕೃತಿಗಳ ಅನುಯಾಯಿಗಳ ನಡುವಿನ ಸಂವಾದವನ್ನು ವಿರೋಧಿಸುವವರಿಂದ ಮಾತ್ರ ಬರಬಲ್ಲುದು ಎಂದು ಸಂಸ್ಥೆ ಹೇಳಿದೆ.
ಈಗಾಗಲೇ ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್ ಶರ್ಮ ಮತ್ತು ನವೀನ್ ಜಿಂದಾಲ್ ಅವರನ್ನು ಪಕ್ಷ ಅವರ ಹುದ್ದೆಗಳಿಂದ ತೆಗೆದುಹಾಕಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.