ನವದೆಹಲಿ: ಅಲ್ಪಸಂಖ್ಯಾತರ ಕುರಿತಂತೆ ಸ್ಪಷ್ಟ 'ವ್ಯಾಖ್ಯಾನ' ನೀಡಬೇಕು ಮತ್ತು ಅಲ್ಪಸಂಖ್ಯಾತರನ್ನು ಜಿಲ್ಲಾವಾರು ಗುರುತಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (ಎನ್‌ಸಿಎಂ) ಕಾಯ್ದೆಯ ನಿಯಮಗಳ ಕ್ರಮಬದ್ಧತೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತವನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವು ಅಕ್ಟೋಬರ್ 23, 1993ರಂದು ಹೊರಡಿಸಿರುವ ಅಧಿಸೂಚನೆಯು ನಿರಂಕುಶವಾದಿ ಕ್ರಮ ಹಾಗೂ ತರ್ಕಹೀನವಾದುದು ಎಂದು ಅರ್ಜಿದಾರರು ವಾದಿಸಿದ್ದಾರೆ.
ಮಥುರಾದ ನಿವಾಸಿ ದೇವಕಿನಂದನ್ ಠಾಕೂರ್ ಅವರು ವಕೀಲ ಆಶುತೋಷ್ ದುಬೆ ಅವರ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ. ಎನ್‌ಸಿಎಂ ಕಾಯ್ದೆ 1992ರ ಸೆಕ್ಷನ್ 2 (ಸಿ) ಸಿಂಧುತ್ವವನ್ನು ಅವರು ಪ್ರಶ್ನಿಸಿದ್ದಾರೆ. 'ಮುಸ್ಲಿಂ, ಕ್ರೈಸ್ತರು, ಸಿಖ್ಖರು, ಬೌದ್ಧರು ಮತ್ತು ಪಾರ್ಸಿಗಳನ್ನು ಕೇಂದ್ರವು ರಾಷ್ಟ್ರೀಯ ಮಟ್ಟದಲ್ಲಿ ಅಲ್ಪಸಂಖ್ಯಾತರು ಎಂದು ಗುರುತಿಸಿ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯು ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಶಯಗಳಿಗೆ ವಿರುದ್ಧವಾದುದಾಗಿದೆ' ಎಂದು ಪ್ರತಿಪಾದಿಸಿದ್ದಾರೆ.
ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಕಾಯ್ದೆಯ ಸೆಕ್ಷನ್ 2 (ಸಿ), ಸಂವಿಧಾನದ ವಿಧಿ 14, 15, 21, 29 ಮತ್ತು 30ಕ್ಕೆ ವಿರುದ್ಧವಾಗಿ ಇರುವುದರಿಂದ ಉಲ್ಲೇಖಿತ ಸೆಕ್ಷನ್ ಅನ್ನು ಅಸಿಂಧು, ಅಸಾಂವಿಧಾನಿಕ ಎಂಬುದಾಗಿ ಘೋಷಿಸಬೇಕು ಎಂದು ಕೋರಿದ್ದಾರೆ.
ಅಧಿಸೂಚನೆ ಪರಿಣಾಮ ಈಗಲೂ ಮುಂದುವರಿದಿದೆ. ಲಡಾಖ್, ಮಿಜೋರಾಂ, ಲಕ್ಷ್ಮದ್ವೀಪ, ಕಾಶ್ಮೀರ, ನಾಗಲ್ಯಾಂಡ್, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್, ಮಣಿಪುರದಲ್ಲಿ ಇಂದಿಗೂ ಅಲ್ಪಸಂಖ್ಯಾತರಾಗಿರುವ ಜುದಾಯಿ, ಬಹಾಯಿ, ಹಿಂದೂಗಳು ತಮ್ಮ ಆಡಳಿತದ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಆಗುತ್ತಿಲ್ಲ. ಇದಕ್ಕೆ ರಾಜ್ಯ ಮಟ್ಟದಲ್ಲಿ 'ಅಲ್ಪಸಂಖ್ಯಾತರನ್ನು' ಗುರುತಿಸದೇ ಇರುವುದೇ ಕಾರಣ. ಇದರ ಪರಿಣಾಮ, ಸಂವಿಧಾನದ ವಿಧಿ 29ರ ಅನ್ವಯ ಇರುವ ಮೂಲಭೂತಹಕ್ಕಿನ ಉಲ್ಲಂಘನೆಯಾಗಿದೆ ಎಂದು ವಿವರಿಸಿದ್ದಾರೆ.
ಎನ್‌ಸಿಎಂ ಕಾಯ್ದೆಯಡಿ ತಮ್ಮನ್ನು 'ಅಲ್ಪಸಂಖ್ಯಾತರು' ಎಂದು ಅಧಿಸೂಚನೆ ಹೊರಡಿಸದ ಕಾರಣ, ತಮ್ಮ ಸಂವಿಧಾನದತ್ತ ಹಕ್ಕನ್ನು ರಾಜ್ಯಗಳ ಬಹುಸಂಖ್ಯಾತ ಸಮುದಾಯಗಳೇ ಪಡೆದುಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.