ನಾಸಿಕ್: ಹನುಮಂತನ ಜನ್ಮಸ್ಥಳ ವಿವಾದಕ್ಕೆ ತೆರೆ ಎಳೆಯಲು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಮಂಗಳವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಗಳ ಎರಡು ಗುಂಪುಗಳ ನಡವೆ ಭಾರೀ ಗಲಾಟೆ ನಡೆದಿದ್ದು, ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಆಧ್ಯಾತ್ಮಿಕ ನಾಯಕ ಕಿಷ್ಕಿಂಧೆ ಮಠಾಧಿಪತಿ ಸ್ವಾಮಿ ಗೋವಿಂದಾನಂದ ಸರಸ್ವತಿ ಅವರು ಇತ್ತೀಚೆಗೆ ಕಿಷ್ಕಿಂಧೆ(ಕರ್ನಾಟಕದ ಹಂಪಿ ಪ್ರದೇಶದಲ್ಲಿದೆ) ಭಗವಾನ್ ಹನುಮಂತನ ಜನ್ಮಸ್ಥಳವಾಗಿದೆ ಮತ್ತು ನಾಸಿಕ್ ಬಳಿಯ ಅಂಜನೇರಿ ಅಲ್ಲ ಎಂದು ಹೇಳಿದ್ದರು.
ಹೀಗಾಗಿ ಹನುಮಂತನ ನಿಜವಾದ ಜನ್ಮಸ್ಥಳ ಯಾವುದು ಎಂಬ ಬಗ್ಗೆ ತೀರ್ಮಾನ ಮಾಡಲು ಇಂದು ನಾಸಿಕ್ ನಲ್ಲಿ ಹಿಂದೂ ಧಾರ್ಮಿಕ ಮುಖಂಡರ ಸಭೆ 'ಧರ್ಮಸಭೆ' ಕರೆಯಲಾಗಿತ್ತು.
ಸಭೆಯಲ್ಲಿ ಹಲವು ಸ್ವಾಮೀಜಿಗಳು, ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿ ವಿರುದ್ಧ ಮುಗಿಬಿದ್ದಿದ್ದಾರೆ. ಹಿಂದೆ ರಾವಣ ಸೀತೆಯನ್ನು ಹೊತ್ತೊಯ್ದಿದ್ದ, ಆದರೆ ಈಗ ನೀವು ಹನುಮಂತನ ಜನ್ಮಸ್ಥಳವನ್ನೇ ಹೈಜಾಕ್ ಮಾಡ್ತಿದ್ದೀರಿ ಅಂತಾ ಆರೋಪಿಸಿದ್ದಾರೆ. ಇದಕ್ಕೆ ಗೋವಿಂದಾನಂದ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಸುಮ್ನೆ ಮಾತಾಡೋದಲ್ಲ, ದಾಖಲೆ ಕೊಡಿ ಅಂತಾ ಸವಾಲ್ ಹಾಕಿದ್ದಾರೆ. ಈ ಹಂತದಲ್ಲಿ, ಮಹಾಂತ ಸುಧೀರದಾಸರು, ಆದಿಗುರು ಶಂಕರಾಚಾರ್ಯರನ್ನು ಕಾಂಗ್ರೆಸ್ಸಿಗ ಎಂದಿದ್ದು ಕಿಷ್ಕಿಂದೆಯ ಗೋವಿಂದಾನಂದ ಸ್ವಾಮೀಜಿಯ ಆಗ್ರಹಕ್ಕೆ ಕಾರಣವಾಯ್ತು. ಕೂಡಲೇ ಕ್ಷಮೆಗೆ ಒತ್ತಾಯಿಸಿದ್ರು. ಈ ವೇಳೆ ಮಹಾಂತ ಸುಧೀರ್ ದಾಸರು, ಮೈಕ್ ಹಿಡಿದು ಹಲ್ಲೆಗೆ ಮುಂದಾದ್ರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದ ಗೋವಿಂದಾನಂದ ಸ್ವಾಮೀಜಿ, ಸ್ವಾಮೀಜಿಗಳಿಗೆ ಅಪಮಾನ ಮಾಡ್ತೀರಾ..? ನೀವು ಈ ಧರ್ಮಸಂಸದ್‍ಗೆ ಕಳಂಕ.. ಕೂಡ್ಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.