ಕಾಸರಗೋಡು: ಶೈಕ್ಷಣಿಕ ಜಿಲ್ಲಾಧಿಕಾರಿಯಾಗಿ ಕನ್ನಡಿಗ ಅಧಿಕಾರಿಯನ್ನು ನೇಮಿಸುವಂತೆ ಒತ್ತಾಯಿಸಿ ಕೇರಳ ರಾಜ್ಯ ಕನ್ನಡ ಮಾಧ್ಯಮ ಶಿಕ್ಷಕರ ನೇತೃತ್ವದಲ್ಲಿ ಶಿಕ್ಷಕರು ಕಾಸರಗೋಡು ಶಿಕ್ಷಣ ಜಿಲ್ಲಾ ಕಛೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್. ವಿ. ಭಟ್ ಧರಣಿ ಉದ್ಘಾಟಿಸಿ ಮಾತನಾಡಿ, ಕಾಸರಗೋಡಿನಲ್ಲಿ ಕನ್ನಡಿಗರ ಮೇಲಿನ ದಬ್ಬಾಳಿಕೆ ಹೆಚ್ಚುತ್ತಿದ್ದು, ಪ್ರಸಕ್ತ ಶಿಕ್ಷಣಾಧಿಕಾರಿ ಸ್ಥಾನಕ್ಕೆ ಮಲಯಾಳಿ ಅಧಿಕಾರಿಯನ್ನು ನೇಮಿಸುವ ಮೂಲಕ ಮತ್ತೊಮ್ಮೆ ಕನ್ನಡಿಗರ ತಾಳ್ಮೆ ಪರೀಕ್ಷೆಗೆ ಸರ್ಕಾರ ಮುಂದಾಗಿದೆ. ಕನ್ನಡಿಗರಿಗೆ ಮೀಸಲಿರಿಸಿರುವ ಜಿಲ್ಲಾ ಶಿಕ್ಷಣಾಧಿಕಾರಿ ಹುದ್ದೆಗೆ ಕಾನೂನುಬಾಹಿರವಾಗಿ ಮಲಯಾಳಿ ಅಧಿಕಾರಿಯನ್ನು ನೇಮಿಸಿರುವುದು ಖಂಡನೀಯ. ತಕ್ಷಣ ಕನ್ನಡಿಗ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಸಂಘಟನೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಬಿ. ಪ್ರದೀಪ್ ಕುಮಾರ್ ಶೆಟ್ಟಿ, ರವೀಂದ್ರನಾಥ ಬಲ್ಲಾಳ್, ಕನ್ನಡ ಹೋರಾಟ ಸಮಿತಿಯ ಕೆ. ಭಾಸ್ಕರ, ಪ್ರಭಾವತಿ ಕೆದಿಲಾಯ, ಎಂ. ಪದ್ಮಾವತಿ, ಶಶಿಕಲಾ, ಶಂಕರನಾರಾಯಣ ಭಟ್, ಪಿ. ಕೆ. ವಿನೋದ್ ರಾಜ್, ಶಿವಕುಮಾರ್ ಬೇಂಗಪದವು, ಕೆ. ಉಮೇಶ್, ಶರತ್ ಕುಮಾರ್, ಜೀವನ್ ಕುಮಾರ್, ಜಲಜಾಕ್ಷಿ ಎನ್. ವಾರಿಜಾ ಕೆ. ಮತ್ತು ಜಯಲತಾ ಉಪಸ್ಥಿತರಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ಜಯಪ್ರಶಾಂತ್ ಸ್ವಾಗತಿಸಿದರು. ಬಾಬು ಬಂದಡ್ಕ ವಂದಿಸಿದರು.