ನವದೆಹಲಿ:ಮತದಾರರ ಪಟ್ಟಿಯಲ್ಲಿನ ಮಾಹಿತಿಗೆ ಆಧಾರ್ ವಿವರಗಳನ್ನೂ ಜೋಡಿಸುವ ನಿಟ್ಟಿನಲ್ಲಿ ಸರಕಾರ ನಿಯಮಗಳನ್ನು ಜಾರಿಗೊಳಿಸಿದ್ದು ಚುನಾವಣೆ ಕಾನೂನುಗಳು (ತಿದ್ದುಪಡಿ) ಕಾಯಿದೆ 2021 ಅನ್ವಯ ನಾಲ್ಕು ಅಧಿಸೂಚನೆಗಳನ್ನು ಚುನಾವಣಾ ಆಯೋಗದ ಜೊತೆಗೆ ಚರ್ಚೆ ನಡೆಸಿ ಸರಕಾರ ಹೊರಡಿಸಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಆಧಾರ್ ವಿವರಗಳನ್ನು ಮತದಾರರ ಪಟ್ಟಿ ಮಾಹಿತಿ ಜೊತೆಗೆ ಜೋಡಿಸಲು ಒದಗಿಸುವುದು ಸ್ವಯಂಪ್ರೇರಿತವಾಗಿದೆ ಎಂದು ಸರಕಾರ ಹೇಳಿದೆ.
ಆದರೆ ಚುನಾವಣೆ ಕಾನೂನುಗಳ (ತಿದ್ದುಪಡಿ) ಕಾಯಿದೆಯು ಮತದಾರ ಪಟ್ಟಿ ನೋಂದಣಿ ಅಧಿಕಾರಿಗಳಿಗೆ ಹೊಸ ಮತದಾರರಾಗಲು ಬಯಸುವವರಿಂದ ಆಧಾರ್ ಸಂಖ್ಯೆಗಳನ್ನು ಕೇಳುವ ಅಧಿಕಾರ ನೀಡಿದೆ. ಅಷ್ಟೇ ಅಲ್ಲದ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿರುವವರಿಂದಲೂ ಆಧಾರ್ ಸಂಖ್ಯೆ ಕೇಳಲು ಅಧಿಕಾರಿಗಳಿಗೆ ಈ ಕಾನೂನು ಅನುಮತಿಸುತ್ತದೆ.
ಅದೇ ಸಮಯ ಆಧಾರ್ ಸಂಖ್ಯೆ ನೀಡಲು ನಿರಾಕರಿಸುವವರಿಗೆ ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಕೆಗೆ ನಿರಾಕರಿಸುವಂತಿಲ್ಲ ಎಂದು ಕಾಯಿದೆ ಹೇಳುತ್ತದೆ.
ಆಧಾರ್ ವಿವರಗಳನ್ನು ಹಂಚಿಕೊಳ್ಳುವುದು ಸ್ವಯಂಪ್ರೇರಿತವಾದರೂ ವಿವರಗಳನ್ನು ನೀಡದೇ ಇರಲು ಬಯಸುವವರು ಸೂಕ್ತ ಕಾರಣಗಳನ್ನು ನೀಡಬೇಕಾಗುತ್ತದೆ ಎಂದು ಹಿಂದಿನ ಮುಖ್ಯ ಚುನಾವಣಾ ಆಯುಕ್ತರಾದ ಸುಶೀಲ್ ಚಂದ್ರ ಮೇ 14ರಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.