ಬದಿಯಡ್ಕ :'ಸಮಾಜದ ಆಗುಹೋಗುಗಳನ್ನು ಬದಲಾಯಿಸುವ ಶಕ್ತಿ ಪತ್ರಕರ್ತರಲ್ಲಿದೆ. ಪ್ರತಿಭೆಗಳ ಅನ್ವೇಷಣೆ, ಸಾಮಾಜಿಕ ಸಮಸ್ಯೆಗಳ ಗಮನಿಸುವಿಕೆ, ಸತ್ಯದರ್ಶನವನ್ನು ಮಾಡಿಸುವ ಅವರ ಸಾಮಾಜಿಕ ಕೊಡುಗೆ ಅನನ್ಯ. ಅಂತಹಾ ವಿಶೇಷ ಗುಣಗಳು ಹಿರಿಯ ಪತ್ರಕರ್ತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರಲ್ಲಿದೆ. ಅವರ ಸೂಕ್ಷ್ಮ ಪ್ರಜ್ಞೆ, ಎಲ್ಲರನ್ನು ಬೆಂಬಲಿಸುವ ಸ್ವಭಾವ, ಸರಳ ಜೀವನ ಶೈಲಿ ಅನುಕರಣೀಯ. ಸಾಹಿತ್ತಿಕವಾಗಿ ಅವರು ಬಹಳ ಎತ್ತರದಲ್ಲಿದ್ದಾರೆ. ಆದರೂ ಎಲ್ಲರಿಗೂ ಆಸರೆಯಾಗುತ್ತಾರೆ' ಎಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಹಾಗೂ ನಿರ್ದೇಶಕ ಕೆ ವಾಮನ್ ರಾವ್ ಬೇಕಲ್ ಹೇಳಿದರು.
ಅವರು ಭಾನುವಾರ ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಕವಿ, ಪತ್ರಕರ್ತ, ಪ್ರಜೋದಯ ದತ್ತಿ ನಿಧಿ ಪ್ರಶಸ್ತಿ ಪುರಸ್ಕøತ ರಾಧಾಕೃಷ್ಣ ಕೆ ಉಳಿಯತ್ತಡ್ಕ ಅವರ ಅಭಿಮಾನಿ ಬಳಗದಿಂದ ನಡೆದ ರಾಧಾಕೃಷ್ಣ ಕೆ ಉಳಿಯತ್ತಡ್ಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಂಗಕಲಾವಿದೆ, ಸಾಹಿತಿ ವಸಂತಲಕ್ಷ್ಮಿ ಪುತ್ತೂರು ಮಾತನಾಡಿ,'ಯೋಗ್ಯರನ್ನು ಹಿಂಬಾಲಿಸುವುದರಿಂದ ಜ್ಞಾನ ದೊರೆಯುತ್ತದೆ. ಮಾನವರು ಪ್ರತೀ ದಿನ ಅನ್ವೇಷಣಾ ಮನೋಭಾವದಿಂದ ಉತ್ತಮ ವಿಚಾರಗಳನ್ನು ಕ್ರೋಡೀಕರಿಸಬೇಕು. ನಿರಂತರ ಶ್ರಮದಿಂದ ಸಾಧನೆಯ ಹಾದಿಯಲ್ಲಿ ಸಾಧಕ ಗೆಲ್ಲುತ್ತಾನೆ' ಎಂದು ಹೇಳಿದರು. ಖ್ಯಾತ ವ್ಯಂಗ್ಯಚಿತ್ರಗಾರ ವೆಂಕಟ್ ಭಟ್ ಎಡನೀರು ಅವರು ಅಭಿನಂದನಾ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಸ್ಥಾಪಕ ಸದಸ್ಯ ನಾರಾಯಣ ಬಾರಡ್ಕ, ನಿವೃತ್ತ ಪ್ರಾಂಶುಪಾಲ ಪ್ರೋ. ಎ ಶ್ರೀನಾಥ್, ಸಾಹಿತಿ ವಿಟ್ಲದ ಸೀತಾಲಕ್ಷ್ಮಿ ವರ್ಮ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾಸರಗೋಡಿನ ರಾಮನಾಥ ಸಾಂಸ್ಕøತಿಕ ಪ್ರತಿಷ್ಠಾನ, ಪೆರ್ಲದ ಸವಿಹೃದಯದ ಕವಿಮಿತ್ರರು ಬಳಗ, ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯ ಸಹಿತ ಅನೇಕ ಸಂಘಟನೆಗಳಿಂದ ರಾಧಾಕೃಷ್ಣ ಕೆ ಉಳಿಯತ್ತಡ್ಕರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಅಭಿನಂದನೆಗೆ ಉತ್ತರಿಸಿದ ರಾಧಾಕೃಷ್ಣ ಕೆ ಉಳಿಯತ್ತಡ್ಕ ಮಾತನಾಡಿ,'ಅಭಿನಂದನೆಗಳು ಯಾವತ್ತೂ ಕೂಡಾ ಆಶೀರ್ವಾದದ ರೂಪದಲ್ಲಿರುತ್ತವೆ. ಅದು ಮನಸ್ಸನ್ನು ತಟ್ಟಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ' ಎಂದು ಹೇಳಿದರು. ರಾಮ ಪಟ್ಟಾಜೆ ಸ್ವಾಗತಿಸಿದರು. ಸುಂದರ ಬಾರಡ್ಕ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅನೇಕ ಮಂದಿ ರಾಧಾಕೃಷ್ಣ ಉಳಿಯತ್ತಡ್ಕ ಅವರ ಅಭಿಮಾನಿಗಳು ಭಾಗವಹಿಸಿದ್ದರು.