ನವದೆಹಲಿ :ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗೆ ವಿವಾದಾತ್ಮಕ 'ಅಗ್ನಿಪಥ್' ಯೋಜನೆಯ ವಿರುದ್ಧ ಪ್ರತಿಭಟನೆಗಳು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಪ್ರತಿಭಟನೆಗಳ ಕೇಂದ್ರಬಿಂದುವಾಗಿರುವ ಬಿಹಾರವು ಹಿಂದೆಂದೂ ಕಂಡರಿಯದ ಹಿಂಸಾಚಾರದಿಂದ ತತ್ತರಿಸಿದ್ದು,ಶನಿವಾರ ರಾತ್ರಿ ಎಂಟು ಗಂಟೆಯವರೆಗೆ ಎಲ್ಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
'ಅಗ್ನಿಪಥ್' ಯೋಜನೆಯನ್ನು ಹಿಂದೆಗೆದುಕೊಳ್ಳುವಂತೆ ಪಟ್ಟು ಹಿಡಿದಿರುವ ಪ್ರತಿಭಟನಾಕಾರರು ಬಂದ್ ಜಾರಿಗೊಳಿಸಲು ಪ್ರಯತ್ನಿಸಿದ್ದು,ಕಲ್ಲುತೂರಾಟದಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ರೈಲ್ವೆ ನಿಲ್ದಾಣ ಮತ್ತು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಸರಕಾರವು ಹೊಸ ಭರವಸೆಗಳನ್ನು ಮತ್ತು ರಿಯಾಯಿತಿಗಳನ್ನು ಘೋಷಿಸಿದೆಯಾದರೂ ಹಲವಾರು ರಾಜ್ಯಗಳಲ್ಲಿ ಪ್ರತಿಭಟನೆ ಮತ್ತು ಹಿಂಸಾಚಾರಗಳು ಮುಂದುವರಿದಿದ್ದು,ಶನಿವಾರ ದೇಶಾದ್ಯಂತ 350ಕ್ಕೂ ಅಧಿಕ ರೈಲುಗಳನ್ನು ರದ್ದುಗೊಳಿಸಲಾಗಿತ್ತು.ಗೃಹ ಮತ್ತು ರಕ್ಷಣಾ ಸಚಿವಾಲಯಗಳು ನಾಲ್ಕು ವರ್ಷಗಳ ಬಳಿಕ ನಿವೃತ್ತರಾಗುವ 'ಅಗ್ನಿವೀರ'ರಿಗೆ ಉದ್ಯೋಗಗಳಲ್ಲಿ ಹೊಸದಾಗಿ ಶೇ.10ರ ಮೀಸಲಾತಿಯ ಪ್ರತ್ಯೇಕ ಭರವಸೆಗಳನ್ನು ನೀಡಿದ್ದರೆ,ನೌಕಾ ಸಚಿವಾಲಯವೂ 'ಅಗ್ನಿವೀರ'ರ ಸೇರ್ಪಡೆಗೆ ಯೋಜನೆಗಳನ್ನು ಪ್ರಕಟಿಸಿದೆ.
ಮಂಗಳವಾರ 'ಅಗ್ನಿಪಥ್' ಯೋಜನೆಯನ್ನು ಪ್ರಕಟಿಸಿದ ಬಳಿಕ ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 250ಕ್ಕೂ ಅಧಿಕ ಜನರನ್ನು ಬಂಧಿಸಿರುವ ಉತ್ತರ ಪ್ರದೇಶ ಪೊಲೀಸರು,400 ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಉ.ಪ್ರ.ರೈಲ್ವೆ ಪೊಲೀಸರೂ ಇತರ 150 ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 'ಅಗ್ನಿಪಥ್' ಯೋಜನೆಯ ವಿರುದ್ಧ ಶನಿವಾರ ಕೇರಳದ ತಿರುವನಂತಪುರ ಮತ್ತು ಕೋಝಿಕೋಡ್ ನಲ್ಲಿಯೂ ಭಾರೀ ಪ್ರತಿಭಟನೆಗಳು ನಡೆದಿವೆ.
ತಿರುವನಂತಪುರದಲ್ಲಿ ಪ್ರತಿಭಟನಾಕಾರರು ತಂಪನೂರ್ ರೈಲುನಿಲ್ದಾಣದಿಂದ ರಾಜಭವನದವರೆಗೆ ಜಾಥಾ ನಡೆಸಿದರೆ, ಕೋಝಿಕೋಡ್ನಲ್ಲಿ ರೈಲುನಿಲ್ದಾಣದ ಹೊರಗೆ ಇಂತಹುದೇ ಪ್ರತಿಭಟನೆ ನಡೆಯಿತು. ಕರ್ನಾಟಕದ ಧಾರವಾಡದಲ್ಲಿ ಜಾಥಾ ನಡೆಸಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಶುಕ್ರವಾರ ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಗಳ ಗುಂಡಿಗೆ 24ರ ಹರೆಯದ ಯುವಕ ಬಲಿಯಾದ ಘಟನೆಯ ಬಗ್ಗೆ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ ರಾವ್ ಅವರು ಮೃತ ರಾಕೇಶನ ಕುಟುಂಬಕ್ಕೆ 25 ಲ.ರೂ.ಪರಿಹಾರ ಮತ್ತು ಕುಟುಂಬದ ಓರ್ವ ಅರ್ಹ ವ್ಯಕ್ತಿಗೆ ಸರಕಾರಿ ಉದ್ಯೋಗವನ್ನು ನೀಡುವುದಾಗಿ ಶನಿವಾರ ಪ್ರಕಟಿಸಿದ್ದಾರೆ.
ಪ.ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಯಲ್ಲಿ ಪ್ರತಿಭಟನಾಕಾರರ ಗುಂಪು ಹಳಿಗಳನ್ನು ಆಕ್ರಮಿಸಿಕೊಂಡು ಪ್ರತಿಭಟನೆಯ ಸಂಕೇತವಾಗಿ ಪುಷ್-ಅಪ್ಗಳನ್ನು ಮಾಡುತ್ತಿದ್ದರಿಂದ ಸುಮಾರು ಒಂದು ಗಂಟೆ ಕಾಲ ರೈಲುಗಳ ಸಂಚಾರಕ್ಕೆ ವ್ಯತ್ಯಯವುಂಟಾಗಿತ್ತು.ಹರ್ಯಾಣದ ಮಹೇಂದ್ರಗಡ ರೈಲು ನಿಲ್ದಾಣದ ಹೊರಗೆ ಪ್ರತಿಭಟನಾಕಾರರು ವಾಹನವೊಂದಕ್ಕೆ ಬೆಂಕಿ ಹಚ್ಚಿದರೆ,ಅತ್ತ ಪಂಜಾಬಿನ ಲುಧಿಯಾನಾದಲ್ಲಿ 50ಕ್ಕೂ ಅಧಿಕ ಪ್ರತಿಭಟನಾಕಾರರು ರೈಲು ನಿಲ್ದಾಣದ ಮೇಲೆ ದಾಳಿ ನಡೆಸಿ ರೈಲ್ವೆ ಆಸ್ತಿಗೆ ಹಾನಿಯನ್ನುಂಟು ಮಾಡಿದ್ದಾರೆ. ರಾಜಸ್ಥಾನಲ್ಲಿ ಜೈಪುರ,ಜೋಧಪುರ ಮತ್ತು ಝುನ್ಝುನು ಸೇರಿದಂತೆ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದ ಸಾವಿರಾರು ಯುವಜನರು ಕೆಲ ಕಾಲ ಆಲ್ವಾರ್ನಲ್ಲಿ ಜೈಪುರ-ದಿಲ್ಲಿ ಹೆದ್ದಾರಿಯನ್ನು ತಡೆದಿದ್ದರು.
ಹಿರಿಯ ಮಿಲಿಟರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಅಗ್ನಿಪಥ್ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮಾಜಿ ಯೋಧರೊಂದಿಗೆ ವ್ಯಾಪಕ ಸಮಾಲೋಚನೆಗಳ ಬಳಿಕವೇ ಯೋಜನೆಯನ್ನು ಪ್ರಕಟಿಸಲಾಗಿದೆ ಎಂದು ಹೇಳಿರುವ ಅವರು,ರಾಜಕೀಯ ಕಾರಣಗಳಿಂದಾಗಿ ಹರಡಲಾಗಿರುವ ತಪ್ಪು ಮಾಹಿತಿಗಳು ಪ್ರತಿಭಟನೆಗೆ ಕಾರಣವಾಗಿವೆ ಎಂದು ಆರೋಪಿಸಿದ್ದಾರೆ.
ದಿಕ್ಕುದಿಶೆಯಿಲ್ಲದ ಯೋಜನೆ
ಈ ನಡುವೆ ಪ್ರತಿಪಕ್ಷಗಳು 'ಅಗ್ನಿಪಥ್' ವಿರುದ್ಧ ಸರಕಾರದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿವೆ. ಕೋವಿಡ್ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು 'ಅಗ್ನಿಪಥ್' ದಿಕ್ಕುದಿಶೆಯಿಲ್ಲದ ಯೋಜನೆಯಾಗಿದ್ದು,ತನ್ನ ಪಕ್ಷವು ಅದರ ವಿರುದ್ಧ ಹೋರಾಡಲಿದೆ ಎಂದು ಹೇಳಿದ್ದಾರೆ.
ಸಿಇಇಗಾಗಿ ಪಟ್ಟು ಕೇರಳದ ವಿವಿಧ ಭಾಗಗಳಿಂದ ನೂರಾರು ಪ್ರತಿಭಟನಾಕಾರರು ತಿರುವನಂತಪುರಕ್ಕೆ
ಆಗಮಿಸಿದ್ದರು. ಸಶಸ್ತ್ರ ಪಡೆಗಳಲ್ಲಿ ಉದ್ಯೋಗಗಳನ್ನು ನಿರಾಕರಿಸುತ್ತಿರುವುದರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚಿನವರು 2021ರಲ್ಲಿ ಸೇನಾ ನೇಮಕಾತಿಗಾಗಿ ದೈಹಿಕ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಬಳಿಕ ಮುಂದಿನ ಸುತ್ತಿಗಾಗಿ ಕಾಯುತ್ತಿದ್ದಾರೆ. ಈ ಹಿಂದೆ ನಡೆಯಬೇಕಿದ್ದ ಮತ್ತು ನಂತರ ಆರು ಬಾರಿ ಮುಂದೂಡಲ್ಪಟ್ಟಿರುವ ಸಂಯುಕ್ತ ಪ್ರವೇಶ ಪರೀಕ್ಷೆ (ಸಿಇಇ)ಯನ್ನು ಶೀಘ್ರ ನಡೆಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕೇರಳದಲ್ಲಿ 5,000 ಯುವಜನರು ಸಿಇಇ ಬರೆಯಲು ಕಾಯುತ್ತಿದ್ದಾರೆ. ಕಳೆದ ವರ್ಷದ ಫೆಬ್ರವರಿ-ಮಾರ್ಚ್ನಲ್ಲಿ ರಾಜ್ಯದಲ್ಲಿ ನೇಮಕಾತಿ ರ್ಯಾಲಿಗಳು ನಡೆದಿದ್ದವು.