ಲಖನೌ/ತ್ರಿಪುರ: ಉತ್ತರ ಪ್ರದೇಶ ಮತ್ತು ತ್ರಿಪುರ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಬಿಜೆಪಿ ಅಭ್ಯರ್ಥಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಗೆಲವು ಸಾಧಿಸಿದ್ದಾರೆ. ಉತ್ತರ ಪ್ರದೇಶದಲ್ಲೂ ಕಮಲ ಅರಳಿದ್ದು, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ತೀವ್ರ ಮುಖಭಂಗ ಅನುಭವಿಸಿದೆ.
ಉತ್ತರ ಪ್ರದೇಶದ ರಾಮ್‌ಪುರ ಮತ್ತು ಅಜಂಗಢ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿಯ ದಿನೇಶ್ ಲಾಲ್ ಯಾದವ್ ನಿರಾಹುವಾ ಅವರು ಅಜಂಗಢ ಕ್ಷೇತ್ರದಲ್ಲಿ 8,000 ಮತಗಳಿಂದ ಗೆದ್ದರೆ, ಘನಶ್ಯಾಮ್ ಸಿಂಗ್ ಲೋಧಿ ರಾಂಪುರ ಕ್ಷೇತ್ರವನ್ನು ಹೆಚ್ಚು ಅಂತರದಿಂದ ಗೆದ್ದಿದ್ದಾರೆ.
ಎರಡೂ ಸ್ಥಾನಗಳು ಅಖಿಲೇಶ್ ಯಾದವ್ ಪಕ್ಷದ ಭದ್ರಕೋಟೆಗಳಾಗಿದ್ದವು. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಅಜಂಗಢ್ ಸ್ಥಾನ ತೆರವಾಗಿದ್ರೆ, ರಾಂಪುರ ಸ್ಥಾನ ಪಕ್ಷದ ಮುಸ್ಲಿಂ ನಾಯಕ ಅಜಂ ಖಾನ್ ವಿಧಾನಸೌಧಕ್ಕೆ ಆಯ್ಕೆಯಾದ ನಂತರ ತೆರವಾಗಿತ್ತು. ಎಸ್ ಪಿ ವಶದಲ್ಲಿದ್ದ ಈ 2 ಸ್ಥಾನಗಳಲ್ಲಿ ಈಗ ಕಮಲ ಅರಳಿದೆ.
ಅಜಂಗಢದಲ್ಲಿ, ಮಾಯಾವತಿಯವರ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಅಭ್ಯರ್ಥಿ ಶಾ ಆಲಂ ಅವರು 2 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಸಮಾಜವಾದಿ ಪಕ್ಷ(ಎಸ್‌ಪಿ) ಎರಡೂ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನೀಡಿದ್ದಾರೆ. ಈ ಬಲವಾದ ಪ್ರದರ್ಶನವು ಸಮಾಜವಾದಿ ಪಕ್ಷದ ಧಮೇಂದ್ರ ಯಾದವ್ ಮೇಲೆ ಪ್ರಮುಖವಾಗಿ ಪ್ರಭಾವ ಬೀರಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರಚಾರಕ್ಕೆ ಗೈರುಹಾಜರಾಗಿದ್ದು ಈ ಬಿಗಿ ಸ್ಪರ್ಧೆಗೆ ಮತ್ತೊಂದು ಅಂಶವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಎರಡು ಕ್ಷೇತ್ರಗಳಲ್ಲಿ ಜೂನ್ 23 ರಂದು ಮತದಾನ ನಡೆದಿದ್ದು, ಅಜಂಗಢದಲ್ಲಿ ಶೇ 49.43 ಮತ್ತು ರಾಂಪುರದಲ್ಲಿ ಶೇ 41.39 ಮತದಾನವಾಗಿತ್ತು.
ರಾಂಪುರದಲ್ಲಿ ಬಿಜೆಪಿ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಗೊಂಡ ಘನಶ್ಯಾಮ್ ಸಿಂಗ್ ಲೋಧಿ ಅವರನ್ನು ಕಣಕ್ಕಿಳಿಸಿತ್ತು. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅಸೀಂ ರಾಜಾ ಸ್ಪರ್ಧಿಸಿದ್ರೆ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಭ್ಯರ್ಥಿಯನ್ನ ಕಣಕ್ಕಳಿಸಿರಲಿಲ್ಲ.
ತ್ರಿಪುರಾದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಗೆದ್ದು ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ.