ನವದೆಹಲಿ: ಬಿಜೆಪಿ ವಕ್ತಾರರು ಪ್ರವಾದಿ ಬಗ್ಗೆ ನೀಡಿದ್ದ ಹೇಳಿಕೆಗೆ ಭಾರತ ಸರ್ಕಾರ ಸ್ಪಷ್ಟನೆ ನೀಡಿದ್ದರೂ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಭಟನೆ, ಖಂಡನೆ ಇನ್ನೂ ನಿಂತಿಲ್ಲ. ಈ ನಡುವೆ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯೊಂದು ಗಮನ ಸೆಳೆಯುತ್ತಿದೆ.
ಒಐಸಿ ಹಾಗೂ ಜಿಸಿಸಿಯ ಹೊರತಾಗಿ 15 ರಾಷ್ಟ್ರಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಪ್ರಹಸನದ ಪರಿಣಾಮ ಆಡಳಿತಾರೂಢ ಬಿಜೆಪಿ ಪಕ್ಷ ತನ್ನ ಸದಸ್ಯರಿಗೆ "ಯಾವುದೇ ಧರ್ಮದ ಬಗ್ಗೆಯೂ ಮಾತನಾಡಬಾರದು" ಎಂಬ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ರವಾನಿಸಿದೆ.
ಭಾರತದ ಗುಪ್ತಚರ ಸಂಸ್ಥೆಗಳ ಪ್ರಕಾರ ಮುಸ್ಲಿಮ್ ರಾಷ್ಟ್ರಗಳಿಂದ ವ್ಯಕ್ತವಾಗುತ್ತಿರುವ ಪ್ರತಿಭಟನೆ ಹಿಂದೆ ಭಾರತ ವಿರೋಧಿ ಹ್ಯಾಷ್ ಟ್ಯಾಗ್ ಕೆಲಸ ಮಾಡಿದ್ದು, ಪಾಕಿಸ್ತಾನದ ಕೈವಾಡವಿದೆ ಎಂದು ಹೇಳಲಾಗುತ್ತಿದೆ.
ಭಾರತ ವಿರೋಧಿ ಹ್ಯಾಷ್ ಟ್ಯಾಗ್ ಗಾಗಿ 750 ದೃಢೀಕರಿಸಿದ ವಿಶಿಷ್ಟ ಬೋಟ್ ಖಾತೆಗಳು ಪತ್ತೆಯಾಗಿದ್ದು, ಪಾಕಿಸ್ತಾನದ ಪಿಟಿಐ ಪಕ್ಷದ ಬೆಂಬಲ ಹೊಂದಿರುವ ಈ ಖಾತೆಗಳಿಂದಲೇ ಭಾರತ ವಿರೋಧಿ ಹ್ಯಾಷ್ ಟ್ಯಾಗ್ ಅಭಿಯಾನ ನಡೆದಿತ್ತು ಎಂದು ಗುಪ್ತಚರ ಇಲಾಖೆ ಹೇಳಿದೆ.
ಹಲವು ರಾಷ್ಟ್ರಗಳು ನೂಪುರ್ ಶರ್ಮಾ ಅವರಿಗೂ ಬೆಂಬಲ ವ್ಯಕ್ತಪಡಿಸಿವೆ. ಡಚ್ ರಾಜಕಾರಣಿ ಗೀರ್ಟ್ ವೈಲ್ಡರ್ಸ್, ನೂಪುರ್ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದು, ಇಸ್ಲಾಮಿಕ್ ರಾಷ್ಟ್ರಗಳ ಆಕ್ರೋಶವನ್ನು ಹಾಸ್ಯಾಸ್ಪದ ಎಂದು ಹೇಳಿದ್ದು, ಭಾರತ ಕ್ಷಮೆ ಕೇಳಬಾರದಿತ್ತು ಎಂದು ಹೇಳಿದ್ದಾರೆ.