ಬದಿಯಡ್ಕ: ಪ್ರಕೃತಿ ಮತ್ತು ನಮಗಿರುವ ಅವಿನಾಭಾವ ಸಂಬಂಧ ದೂರವಾಗಿ ಪ್ರಕೃತಿಯನ್ನು ಅಭಿವೃದ್ಧಿಯ ಹೆಸರಲ್ಲಿ ವಿಕೃತಿಗೊಳಿಸುವ ಕಾರ್ಯ ನಡೆಯುತ್ತಿದೆ. ಸಕಲವನ್ನೂ ನೀಡಿ ನಮ್ಮನ್ನು ಆರೈಕೆ ಮಾಡಿದ ತಾಯಿಯ ಮಡಿಲನ್ನು ಕೊರೆದು, ಕಟ್ಟಡಗಳ ನಿರ್ಮಿಸಿ, ಮರಗಿಡಗಳ ನಾಶ ಮಾಡುವ ಕಾಲದಲ್ಲಿ ಪರಿಸರ ದಿನಾಚರಣೆಯ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಶ್ಲಾಘನೀಯ. ಇದು ಒಂದು ದಿನದ ಆಚರಣೆಯಾಗದೆ ದೈನಂದಿನ ಹವ್ಯಾಸವಾಗಬೇಕು. ಗಿಡ ನೆಡುವುದು, ಆರೈಕೆ ಮಾಡುವುದನ್ನು ರೂಢಿಸಿಕೊಂಡಾಗ ಮುಂದಿನ ಜನಾಂಗವೂ ಆ ಹಾದಿಯಲ್ಲಿ ಸಾಗಿ ಪರಿಸರ ಸಂರಕ್ಷಣೆಯತ್ತ ಚಿತ್ತ ಹರಿಸುವಂತಾಗುವುದು ಎಂದು ಬದಿಯಡ್ಕ ಪಂಚಾಯತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯ ಪಟ್ಟರು.
ಅವರು ಶ್ರೀ ಧರ್ಮಶಾಸ್ತಾ ಭಜನಾ ಮಂದಿರ ವಿದ್ಯಾಗಿರಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಾಸರಗೋಡು, ಪ್ರಗತಿಬಂಧು ಸ್ವ -ಸಹಾಯ ಸಂಘಗಳ ಒಕ್ಕೂಟಗಳ ಸಹಯೋಗದೊಂದಿಗೆ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕೃಪಾಶೀರ್ವಾದದೊಂದಿಗೆ ಪರಿಸರ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂದಿರದ ಅಧ್ಯಕ್ಷ ಪ್ರಭಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತು ಸದಸ್ಯೆ ಶುಭಲತಾ ರೈ, ಜನಜಾಗೃತಿ ವೇದಿಕೆಯ ಸದಸ್ಯ ಶ್ಯಾಮ್ ಆಳ್ವ, ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷ ತಾರಾನಾಥ ರೈ, ಜನಜಾಗೃತಿ ವೇದಿಕೆಯ ಸದಸ್ಯ ಅಖಿಲೇಶ್ ನಗುಮುಗಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ನಂದಿತಾ, ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ಸೇವಾ ಪ್ರತಿನಿಧಿ ಕವಿತಾಗಿರೀಶ್ ರೈ, ಭಜನಾ ಮಂದಿರವಿದ್ಯಾಗಿರಿ ಸಮಿತಿಯ ಸದಸ್ಯರು ಹಾಗೂ ಸಾಮಾಜಿಕ, ಧಾರ್ಮಿಕ ಮುಖಂಡರು ಮತ್ತು ಮಹಿಳೆಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಿಡ ವಿತರಿಸಲಾಯಿತು. ಭಜನಾ ಮಂದಿರದ ಸುತ್ತಲೂ ಗಿಡ ನೆಡಲಾಯಿತು.