ತ್ರಿಶೂರ್: ತ್ರಿಶೂರ್‍ನ ರಾಮವರ್ಮಪುರಂನಲ್ಲಿರುವ ಮಹಿಳಾ ಮಂದಿರ ವಿವಾಹ ಸಂಭ್ರಮಕ್ಕೆ ಸಾಕ್ಷಿಯಾಯಿತು. ವಧು ಪಾರ್ವತಿ ಅವರು ಈ ಮಹಿಳಾ ಮಂದಿರದ ನಿವಾಸಿ. ಲಾಲೂರು ಮಾನಾಯಕಪ್ಪರಂಬಿಲ್‍ನಲ್ಲಿರುವ ರಾಯ್ಸನ್, ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾರ್ವತಿಗೆ ಮಾಲೆ ಹಾಕಿ ವಿವಾಹಿತರಾದರು. ಮಹಿಳಾಮಂದಿರದ ಮೇಲ್ವಿಚಾರಕಿಯರ ನೇತೃತ್ವದಲ್ಲಿ ಎಲ್ಲ ಸಮಾರಂಭಗಳು ನಡೆದವು. ಶಾಸಕರು, ಮೇಯರ್, ಜಿಲ್ಲಾಧಿಕಾರಿಗಳು ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ತ್ರಿಶೂರ್ ಕಾರ್ಪೋರೇಷನ್ ಅಧೀನದಲ್ಲಿರುವ ರಾಮವರ್ಮಪುರಂ ಮಹಿಳಾ ಮಂದಿರಕ್ಕೆ ಎರಡು ವರ್ಷಗಳ ಹಿಂದೆ ಪಾರ್ವತಿ ಅನಾಥೆಯಾಗಿ ವಾಸಿಸಲು ಬಂದಿದ್ದರು. ರಾಯ್ಸನ್ ಎಲ್ & ಟಿ ಕನ್ಸ್ಟ್ರಕ್ಷನ್ ಕಂಪನಿಯ ಉದ್ಯೋಗಿ. ಜಿಲ್ಲಾಧಿಕಾರಿ ಹರಿತಾ ವಿ ಕುಮಾರ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ವಿವಾಹ ನೆರವೇರಿತು. ಮಹಿಳಾ ಮಂದಿರದ ಮೇಲ್ವಿಚಾರಕಿ ಪಿ.ಎಸ್.ಉಷಾ ಮಾತೃ ಸ್ಥಾನದಿಂದ ಆಶೀರ್ವದಿಸಿದರು.
ಸಮಾರಂಭದಲ್ಲಿ ಯುವ ಲೇಖಕಿ ದೀಪಾಜಯರಾಜ್ ಅವರ ‘ಮಾಂಸ ನಿರ್ಬಂಧಮಲ್ಲ ರಾಗಂ’ ಕಾದಂಬರಿಯನ್ನು ವಧು-ವರರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಲಾಯಿತು. ಗುರುವಾರ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಕಾರ್ಯ ಪೂರ್ಣಗೊಂಡಿತು.
ಜಿಲ್ಲಾ ವಾರ್ತಾಧಿಕಾರಿ ಸಿ.ಪಿ.ಅಬ್ದುಲ್ ಕರೀಂ, ಯೋಜನಾಧಿಕಾರಿ ಎನ್.ಕೆ.ಶ್ರೀಲತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪಿ.ಜಿ.ಮಂಜು, ಮಾಜಿ ಮೇಯರ್ ಅಜಿತಾ ವಿಜಯನ್, ಪಾಲಿಕೆ ಸದಸ್ಯರು, ಅಂಗನವಾಡಿ ಪ್ರತಿನಿಧಿಗಳು, ಮಕ್ಕಳ ಮನೆ ಸೇರಿದಂತೆ ವಿವಿಧ ಸಮಾಜ ಕಲ್ಯಾಣ ಗೃಹಗಳ ಸದಸ್ಯರು ವಿವಾಹ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದರು.