ಕಾನ್ಪುರ: ನಾನು ದೇಶದಲ್ಲಿ ಪ್ರಬಲ ಪ್ರತಿಪಕ್ಷದ ಪರವಾಗಿದ್ದೇನೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಕುಟುಂಬ ರಾಜಕೀಯವನ್ನು ಕಟುವಾಗಿ ಟೀಕಿಸಿದ್ದಾರೆ. ಕುಟುಂಬ ರಾಜಕೀಯ ಪ್ರತಿಭೆಗಳನ್ನು ಕೊಲ್ಲುತ್ತದೆ ಎಂದು ಪ್ರಧಾನಿ ಮೋದಿ ಶುಕ್ರವಾರ ಹೇಳಿದ್ದಾರೆ.
ಇಂದು ಉತ್ತರ ಪ್ರದೇಶದ ಕಾನ್ಪುರ್ ದೇಹಟ್‌ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕುಟುಂಬ ರಾಜಕೀಯದ ಬಗ್ಗೆ ನನ್ನ ಹೇಳಿಕೆಗಳನ್ನು ಜನ ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಮತ್ತು "ಪರಿವಾರದ" ಕುರಿತ ನನ್ನ ಟೀಕೆ ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಮಾಡಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ನಾನು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಬಗ್ಗೆ ಮಾತನಾಡುವುದಿಲ್ಲ, ಪರಿವಾರದ ನನ್ನ ವ್ಯಾಖ್ಯಾನಕ್ಕೆ ಸರಿಹೊಂದುವ ಜನರು ನನ್ನ ಮೇಲೆ ಕೋಪಗೊಂಡಿದ್ದಾರೆ. ಈ ಕುಟುಂಬಗಳು ದೇಶಾದ್ಯಂತ ನನ್ನ ವಿರುದ್ಧ ಒಂದಾಗುತ್ತಿವೆ. ಆದರೆ ಸ್ವಜನಪಕ್ಷಪಾತದಲ್ಲಿ ಸಿಲುಕಿರುವ ವಿಪಕ್ಷಗಳು, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ದೇಶದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡಬೇಕು" ಎಂದು ಸಲಹೆ ನೀಡಿದರು.
"ನನ್ನ ಹೇಳಿಕೆಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ನಾನು ನಿಮಗೆ ಹೇಳಲೇಬೇಕು. ದೇಶದಲ್ಲಿ ಪ್ರಬಲ ಪ್ರತಿಪಕ್ಷ ಇರಬೇಕು ಮತ್ತು ರಾಜಕೀಯ ಪಕ್ಷಗಳು ಕುಟುಂಬ ರಾಜಕಾರಣದಿಂದ ಹೊರಬರಬೇಕು ಎಂದು ನಾನು ಬಯಸುತ್ತೇನೆ" ಎಂದು ಪ್ರಧಾನಿ ಹೇಳಿದ್ದಾರೆ.
ನಾನು ಪರಿವಾರವಾದ ಮತ್ತು ಕುಟುಂಬ ರಾಜಕಾರಣವನ್ನು ವಿರೋಧಿಸುತ್ತೇನೆ. ನನ್ನ ಅಭಿಪ್ರಾಯವನ್ನು ಇಡೀ ದೇಶ ಅನುಮೋದಿಸುತ್ತಿದೆ. ಇದೇ ಕಾರಣಕ್ಕೆ ವಿಪಕ್ಷಗಳು ನನ್ನ ಮೇಲೆ ಮುಗಿಬೀಳುತ್ತವೆ. ವಿಪಕ್ಷಗಳು ಮೋದಿಯನ್ನು ಗುರಿ ಮಾಡಿ ಟೀಕೆ ಮಾಡಿದರೆ ಏನೂ ಅಭ್ಯಂತರವಿಲ್ಲ. ಆದರೆ ವಿಪಕ್ಷಗಳ ಮೋದಿ ದ್ವೇಷ ಪ್ರಜಾತಂತ್ರವನ್ನು ದುರ್ಬಲಗೊಳಿಸಬಾರದು ಎಂದಿದ್ದಾರೆ.