ಪೆರ್ಲ : ಪೆರ್ಲ ಪೇಟೆಯ ಹೃದಯಭಾಗದ ಅಶ್ವತ್ಥ ಕಟ್ಟೆಯ ವಠಾರಕ್ಕೆ ವ್ಯಾಪಕವಾಗಿ ತ್ಯಾಜ್ಯ ಸುರಿಯುವ ಮೂಲಕ ಸಾಮಾಜಿಕ ಶಾಂತಿ ಕದಡುವ ಯತ್ನ ನಡೆಸಲಾಗುತ್ತಿದೆ. ಇಲ್ಲಿನ ಗುತ್ತಿಗೆದಾರರೊಬ್ಬರು ಕಟ್ಟಡ ನಿರ್ಮಾಣಕ್ಕಾಗಿ ಶುಚೀಕರಿಸಿದ ತ್ಯಾಜ್ಯವನ್ನು ಕಟ್ಟೆ ವಠಾರಕ್ಕೆ ತಂದು ಸುರಿಯುವ ಮೂಲಕ ಅಶ್ವತ್ಥಕಟ್ಟೆಯ ಪಾವಿತ್ರ್ಯಕ್ಕೂ ಧಕ್ಕೆ ತಂದೊಡ್ಡುವ ಕೆಲಸ ಮಾಡಿದ್ದಾರೆ ಎಂಬುದಾಗಿ ಸಥಳೀಯರು ದೂರಿದ್ದಾರೆ. ಇಂತಹ ಕಿಡಿಗೇಡಿ ಕೃತ್ಯದ ಮೂಲಕ ಸರ್ಕಾರದ ಶುಚಿತ್ವ ಯೋಜನೆಗೆ ಸವಾಲೆಸೆಯುವ ಕೃತ್ಯವೂ ನಡೆದುಬರುತ್ತಿದೆ.
ಪೆರ್ಲದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಸಂದರ್ಭ ಶ್ರೀಗಣೇಶ ವಿಗ್ರಹವನ್ನು ಇದೇ ಅಶ್ವತ್ಥಕಟ್ಟೆಯಲ್ಲಿರಿಸಿ ಪೂಜೆ ಸಲ್ಲಿಸಿಕೊಂಡು ಬರುತ್ತಿರುವುದು ವಾಡಿಕೆಯಾಗಿದ್ದು, ಏಕಾಏಕಿ ಕಟ್ಟೆ ಸುತ್ತು ತ್ಯಾಜ್ಯ ಸುರಿದಿರುವುದರಿಂದ ಭಕ್ತಾದಿಗಳ ಭಾವನೆಗೂ ಧಕ್ಕೆಯುಂಟಾಗಿದೆ ಎಂದು ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕಳೆದ ಕೆಲವು ವರ್ಷಗಳಿಂದ ಪೆರ್ಲ ಪೇಟೆಯಲ್ಲಿ ಶ್ರಮದಾನದ ಮೂಲಕ ನಿರಂತರ ನಡೆದುಬರುತ್ತಿದ್ದ ಶುಚೀಕರಣ ಕಾರ್ಯ ಸಮಾಜಕ್ಕೆ ಮಾದರಿಯಾಗಿ ಮೂಡಿಬಂದಿತ್ತು. ಈ ಮಧ್ಯೆ ಪೇಟೆಯ ತ್ಯಾಜ್ಯವನ್ನು ಪೇಟೆ ಮಧ್ಯೆ ಇರುವ ಅಶ್ವತ್ಥ ªಮರದ ಬುಡಕ್ಕೆ ತಂದು ಸುರಿಯುವ ಮೂಲಕ ಸಾಮಾಜಿಕ ಶಾಂತಿ ಕದಡುವ ಯತ್ನ ನಡೆಸಲಾಗಿದೆ ಎಂದು ಸ್ಥಳೀಯ ವ್ಯಾಪಾರಿಗಳು ಹಾಗೂ ನಾಗರಿಕರು ದೂರಿದ್ದಾರೆ. ತ್ಯಾಜ್ಯ ಸುರಿದವರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ತ್ಯಾಜ್ಯ ತೆರವುಗೊಳಿಸಿ ಈ ಪ್ರದೇಶದಲ್ಲಿ ಶುಚಿತ್ವ ಪಾಲಿಸುವಂತೆ ನಾಗರಿಕರ ಪರವಾಗಿ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ.