ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ವರದಿಯಲ್ಲಿನ ಟೀಕೆಗಳನ್ನು ಭಾರತ ಶುಕ್ರವಾರ ತಳ್ಳಿ ಹಾಕಿದೆ. ಅಂತಾರಾಷ್ಟ್ರೀಯ ಸಂಬಂಧದಲ್ಲಿ ವೋಟ್ ಬ್ಯಾಂಕ್ ರಾಜಕಾರಣದ ಅಭ್ಯಾಸವಾಗುತ್ತಿರುವುದು ದುರಾದೃಷ್ಟಕರವಾಗಿದೆ ಎಂದು ಹೇಳಿದೆ.
ವರದಿಯನ್ನು ಭಾರತವನ್ನು ಪ್ರೇರಿತ ಮಾಹಿತಿಗಳು ಹಾಗೂ ತಾರತಮ್ಯದಿಂದ ನೋಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಕೇನ್ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ 2021 ರಲ್ಲಿ ಭಾರತದಲ್ಲಿ ನಡೆದ ಹತ್ಯೆಗಳು, ಹಲ್ಲೆಗಳು ಸೇರಿದಂತೆ ಅಲ್ಪಸಂಖ್ಯಾತ ಸದಸ್ಯರ ಮೇಲೆ ದಾಳಿ ನಡೆದಿರುವುದಾಗಿ ಆರೋಪಿಸಲಾಗಿದೆ.
ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ ಮೆಂಟ್ ಬಿಡುಗಡೆ ಮಾಡಿರುವ ವರದಿ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳು ಮಾಡಿರುವ ಟೀಕೆಗಳನ್ನು ನಾವು ಗಮನಿಸಿದ್ದೇವೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿಯೂ ವೋಟ್ ಬ್ಯಾಂಕ್ ರಾಜಕಾರಣ ಅಭ್ಯಾಸವಾಗುತ್ತಿರುವುದು ದುರಾದೃಷ್ಟಕರವಾಗಿದೆ ಎಂದು ಬಾಗ್ಚಿ ಹೇಳಿದ್ದಾರೆ.
ಯುಎಸ್ ಜೊತೆಗಿನ ಚರ್ಚೆಯಲ್ಲಿ ಜನಾಂಗೀಯ, ನೈತಿಕ ಪ್ರೇರಿತ ದಾಳಿಗಳು, ದ್ವೇಷಕಾರಿ ಅಪರಾಧಗಳು ಮತ್ತು ಬಂದೂಕಿನಿಂದಾಗುವ ಹಿಂಸಾಚಾರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದರು.