ಉಪ್ಪಿನಕಾಯಿ ಎಂದರೆ ಎಲ್ಲರಿಗೂ ಬಾಯಲ್ಲಿ ನೀರೂರುತ್ತದೆ. ಹಳ್ಳಿಯಲ್ಲೆಲ್ಲಾ ಬೆಳಗ್ಗೆ ಗಂಜಿ, ಮೊಸರಿನೊಂದಿಗೆ ಒಂದು ತುಂಡು ಉಪ್ಪಿನಕಾಯಿ ನೆಂಚಿಕೊಂಡರೆ ಸಾಕು. ಅದೇ ಬೆಳಗ್ಗಿನ ಟಿಫನ್. ಮೊಸರನ್ನಕಂತೂ ಉಪ್ಪಿನಕಾಯಿ ಬೇಕೇ ಬೇಕು. ಗಾಳಿಯಾಡದೇ ಇರುವ ಭರಣಿಯಲ್ಲಿ ಉಪ್ಪಿನಕಾಯಿಯನ್ನು ಹಾಕಿಟ್ಟರೆ ವರ್ಷಗಳ ಕಾಲ ಕೆಡದೇ ಇರುತ್ತದೆ. ಕರಾವಳಿ, ಮಲೆನಾಡ ಕಡೆಯಂತೂ ಮಿಡಿಮಾವಿನಕಾಯಿ ಉಪ್ಪಿನಕಾಯಿ ಫೇಮಸ್. ಅದು ಬಿಟ್ಟರೆ ತರಕಾರಿ ಉಪ್ಪಿನಕಾಯಿ ಒಮ್ಮೆ ಹಾಕಿಟ್ಟರೆ ತಿಂಗಳುಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು. ಏನಪ್ಪಾ ಅಂದ್ರೆ ಹಲ್ಲಿನ ತುದಿಯಲ್ಲಿ ಕಚ್ಚಿ, ಬಾಯೆಲ್ಲಾ ಚಪ್ಪರಿಸಿಕೊಂಡು ತಿನ್ನುವ ಉಪ್ಪಿನಕಾಯಿ ಆರೋಗ್ಯಕ್ಕೂ ಒಳ್ಳೆಯದೆನ್ನುತ್ತಾರೆ. ಹೌದು.. ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು, ಅತಿಯಾದರೆ ಮಾತ್ರ ಸಮಸ್ಯೆ.. ಈ ಕುರಿತಾದ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ ನೋಡಿ.
ಉಪ್ಪಿನಕಾಯಿಯಲ್ಲಿರುವ ಪೌಷ್ಟಿಕಾಂಶಗಳು ಪ್ರತಿಯೊಂದು ಸಾಂಪ್ರದಾಯಿಕ ಊಟದಲ್ಲೂ ಮೊದಲಿಗೆ ಬಡಿಸುವುದೇ ಉಪ್ಪಿನಕಾಯಿ. ತಟ್ಟೆಯಲ್ಲಿ ಮೊದಲ ಪ್ರಾಧಾನ್ಯತೆ ಉಪ್ಪಿನಕಾಯಿಗೇ ಎಂದೇ ಹೇಳಬಹುದು. ರಸಗ್ರಂಥಿಗಳಲ್ಲಿ ನೀರೂರಿಸುವ ಉಪ್ಪಿನಕಾಯಿ ಹೆಚ್ಚು ನೀರು, ಕಡಿಮೆ ಫ್ಯಾಟ್ ಹಾಗೂ ಪ್ರೋಟೀನ್ ಹೊಂದಿರುತ್ತದೆ. ಉಪ್ಪಿನ ನೀರಿನಲ್ಲಿ ನೆನೆಯುವುದರಿಂದ ಉಪ್ಪಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್‌ಗಳೂ ಇರುತ್ತವೆ. ಒಂದು ಟೇಬಲ್ ಸ್ಫೂನ್ ಉಪ್ಪಿನಕಾಯಿಯಲ್ಲಿ ಇರುವ ಪೌಷ್ಟಿಕಾಂಶಗಳ ಮಾಹಿತಿ ಇಲ್ಲಿದೆ ನೋಡಿ. ಕ್ಯಾಲೊರಿ 80 ಕೊಬ್ಬು 5 ಗ್ರಾಂ ಸೋಡಿಯಂ 600 ಮಿ.ಗ್ರಾಂ ಕಾರ್ಬೋಹೈಡ್ರೇಟ್ಸ್- 7 ಗ್ರಾಂ ಸಕ್ಕರೆ - 1 ಗ್ರಾಂ ಫೈಬರ್- 1ಗ್ರಾಂ ಪ್ರೋಟೀನ್ - 1ಗ್ರಾಂ ಕ್ಯಾಲ್ಸಿಯಂ - 52ಮಿ.ಗ್ರಾಂ ಕಬ್ಬಿಣಾಂಶ - 1.8 ಮಿ.ಗ್ರಾಂ ಅಲ್ಲದೇ ಉಪ್ಪಿನಕಾಯಿಯು ವಿಟಮಿನ್ ಎ, ವಿಟಮಿನ್ ಕೆ, ಪೊಟ್ಯಾಷಿಯಂ, ರಂಜಕ ಮತ್ತು ಫೋಲೆಟ್‌ನ ಉತ್ತಮ ಮೂಲವಾಗಿದೆ.
ಉಪ್ಪಿನಕಾಯಿಯ ಪ್ರಯೋಜನಗಳು ಉಪ್ಪಿನಕಾಯಿಯು ವಿಟಮಿನ್ ಹಾಗೂ ಖನಿಜಾಂಶಗಳ ಅತ್ಯುತ್ತಮ ಮೂಲವಾಗಿದೆ. ಸಂಶೋಧನೆಯ ಮೂಲಕವೂ ಉಪ್ಪಿನಕಾಯಿಯನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ ಎನ್ನುವುದನ್ನು ಸಾಬೀತುಪಡಿಸಿದೆ, ಉಪ್ಪಿನಕಾಯಿಯ ಪ್ರಯೋಜನಗಳು ಹೀಗಿದೆ ನೋಡಿ.
1. ಹೃದಯದ ಸಮಸ್ಯೆಯ ಅಪಾಯ ಕಡಿಮೆ ಉಪ್ಪಿನಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್ ಹಲವು ರೀತಿಯ ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡುತ್ತೆ. ಬೀಟಾ ಕ್ಯಾರೋಟಿನ್‌ನಂತಹ ಕ್ಯಾರೋಟಿನಾಯ್ಡ್ ಸಮೃದ್ಧವಾಗಿರುವ ಆಹಾರ ಸೇವನೆ ಹೃದಯ ರೋಗವನ್ನು ನಿಯಂತ್ರಿಸುವುದಲ್ಲದೇ, ಹೃದಯದ ಆರೋಗ್ಯವನ್ನು ಕಾಪಾಡಲೂ ಸಹಕಾರಿ.
2. ಜೀವಕೋಶದ ಹಾನಿಯನ್ನು ಕಡಿಮೆಗೊಳಿಸುವುದು ಮನೆಯಲ್ಲಿ ತಯಾರಿಸುವಂತಹ ಉಪ್ಪಿನಕಾಯಿ ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ. ಇದು ಅತ್ಯಂತ ಸೂಕ್ಷ್ಮ ಪೋಷಕಾಂಶಗಳಾಗಿದ್ದು, ಇತರ ಸಮಸ್ಯೆಗಳಿಂದ ದೇಹವನ್ನು ರಕ್ಷಿಸುತ್ತದೆ. ಉಪ್ಪಿನಕಾಯಿಯು ಹೆಚ್ಚು ಬಲಿಯದೇ ಇರುವುದರಿಂದ ಆಂಟಿಆಕ್ಸಿಡೆಂಟ್‌ನ ಸಮೃದ್ಧ ಮೂಲವಾಗಿರುತ್ತದೆ. ಹಾಗಾಗಿ ಹೆಚ್ಚು ಆಂಟಿಆಕ್ಸಿಡೆಂಟ್ ಬಯಸುವಂತವರಿಗೆ ಉಪ್ಪಿನಕಾಯಿ ಅತ್ಯುತ್ತಮ.
3. ತೂಕ ಇಳಿಕೆಗೆ ಸಹಕಾರಿ ಉಪ್ಪಿನಕಾಯಿ ಕಡಿಮೆ ಕ್ಯಾಲೊರಿ ಇರುವ ಆಹಾರವಾಗಿದೆ. ಅದರಲ್ಲಿರುವ ಹೆಚ್ಚಿನ ನೀರಿನಂಶದಿಂದ ಹೆಚ್ಚು ಸಮಯ ಹೊಟ್ಟೆ ತುಂಬಿರುವಂತೆ ಅನಿಸಬಹುದು. ಕೆಲವೊಂದು ವಿನೆಗರ್ ಹಾಕಿರುವ ಉಪ್ಪಿನಕಾಯಿಯ ಸೇವನೆ ಹಸಿವನ್ನು ಕಡಿಮೆ ಮಾಡುತ್ತದೆ. ಈ ವಿನೆಗರ್ ಜೀರ್ಣಾಂಗ ವ್ಯವಸ್ಥೆಯು ಕಾರ್ಬೋಹೃಡ್ರೇಟ್‌ಗಳನ್ನು ಹೀರಿಕೊಳ್ಳುವ ಸಮಯವನ್ನು ನಿಧಾನಗೊಳಿಸುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ. ನಿಮ್ಮ ಶಕ್ತಿಯ ಮಟ್ಟವನ್ನೂ ಸ್ಥಿರವಾಗಿಸುವುದು ಮತ್ತು ಹಸಿವನ್ನು ಪ್ರಚೋದಿಸುವ ಇನ್ಸುಲಿನ್ ಕಡಿಮೆಯಾಗುತ್ತದೆ.
4. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ನಮ್ಮಲ್ಲಿ ಕೆಲವೊಂದು ಉಪ್ಪಿನಕಾಯಿಯನ್ನು ತಯಾರಿಸುವಾಗ ಅರಿಶಿನವನ್ನೂ ಸೇರಿಸುತ್ತಾರೆ. ಈ ಅರಿಶಿನದಲ್ಲಿರುವ ರಾಸಾಯನಿಕವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ನಮ್ಮ ದೇಹವು ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುವುದು.
5. ಜೀರ್ಣಕ್ರಿಯೆಯನ್ನು ಸುಧಾರಿಸುವುದು ನಮ್ಮಲ್ಲಿ ಏನೇ ಹಬ್ಬ ಹರಿದಿನಗಳಿರಲಿ ಅಥವಾ ಸಾಮಾನ್ಯ ದಿನಗಳಲ್ಲಿ ಕೂಡಾ ತಟ್ಟೆಯಲ್ಲಿ ಉಪ್ಪಿನಕಾಯಿ ಇದ್ದೇ ಇರುತ್ತದೆ. ಯಾಕೆಂದರೆ ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಎನ್ನುವ ಕಾರಣಕ್ಕಾಗಿ ಹೆಚ್ಚಾಗಿ ಬಳಸುತ್ತಾರೆ. ಹೆಚ್ಚಿದ ಆಂಟಿಬಯೋಟಿಕ್‌ಗಳ ಕಾರಣದಿಂದಾಗಿ ನಮ್ಮ ದೇಹದಲ್ಲಿರುವ ಪ್ರೊಬಯೋಟಿಕ್ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಇದರಿಂದ ಹಲವು ಜೀರ್ಣ ಸಂಬಂಧೀ ತೊಂದರೆ ಕಾಣಿಸಿಕೊಳ್ಳುತ್ತದೆ. ಉಪ್ಪಿನಕಾಯಿ ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹಾಗಾಗಿ ಇದು ಜೀರ್ಣಾಂಗ ವ್ಯೂಹದ ಆರೋಗ್ಯವನ್ನೂ ಸುಧಾರಿಸುವುದು.
6.ಯಕೃತ್ತಿನ ಆರೋಗ್ಯಕ್ಕೆ ಉತ್ತಮ ನೆಲ್ಲಿಕಾಯಿ ಉಪ್ಪಿನಕಾಯಿ ನೆಲ್ಲಿಕಾಯಿ ಸೀಸನ್‌ನಲ್ಲಿ ನೆಲ್ಲಿಕಾಯಿಯ ಉಪ್ಪಿನಕಾಯಿಯಂತೂ ಒಂದು ಡಬ್ಬಿಯಲ್ಲಿ ಇದ್ದೇ ಇರುತ್ತೆ. ಇದು ಯಕೃತ್ತಿನ ಆಆರೋಗ್ಯಕ್ಕೂ ಒಳ್ಳೆಯದಂತೆ. ಹೇಗೆ ಅಂತೀರಾ.. ನೆಲ್ಲಿಕಾಯಿ ಉಪ್ಪಿನಕಾಯಿಯಲ್ಲಿ ಹೈಪಟೋಪ್ರೊಟೆಕ್ಟಿವ್ ಗುಣಲಕ್ಷಣಗಳಿರುತ್ತವೆ. ಇದು ಇತರ ಹಾನಿಕಾರ ಅಂಶಗಳಿಂದ ಯಕೃತ್ತನ್ನು ರಕ್ಷಿಸುತ್ತೆ. ಹಾಗಾಗಿ ನೆಲ್ಲಿಕಾಯಿ ಉಪ್ಪಿನಕಾಯಿಯ ನಿಯಮಿತ ಸೇವನೆಯಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
7. ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು ಮಾವಿನ ಉಪ್ಪಿನಕಾಯಿಯಲ್ಲಿರುವ ವಿಟಮಿನ್‌ಸಿ ಯ ಅಂಶ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ವಿಟಮಿನ್ ಸಿಯು ಕೊಲಾಜೆನ್ ಅನ್ನು ಉತ್ಪಾದಿಸುವುದು ಇದು ಚರ್ಮದ ಆಳವಾದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತೆ, ಮತ್ತು ಚರ್ಮವನ್ನು ಕಾಂತಿಯುತ, ಮೃದುವಾಗಿಸುತ್ತದೆ.
8. ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು ಮಾವಿನಲ್ಲಿರುವ ಲುಟೀನ್, ಜಿಯಾಕ್ಸಾಂಥೀನ್ ಮತ್ತು ವಿಟಮಿನ್ ಎ ಕಣ್ಣಿನ ದೃಷ್ಟಿಗೆ ಒಳ್ಳೆಯದು. ಅಲ್ಲದೇ ಉಪ್ಪಿನಕಾಯಲ್ಲಿರುವ ಆಂಟಿಆಕ್ಸಿಡೆಂಟ್ ದೃಷ್ಟಿಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ವಯೋಸಹಜ ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ.
ಉಪ್ಪಿನಕಾಯಿ ಸೇವನೆಯ ಅಡ್ಡಪರಿಣಾಮಗಳು:
ಊಟ ಮಾಡುವಾಗ ತಟ್ಟೆಯಲ್ಲಿ ಇಷ್ಟೇ ಚೂರು ಉಪ್ಪಿನಕಾಯಿ ಹಾಕುತ್ತಾರೆ, ಮನೆಯಲ್ಲಿ ಉಪ್ಪಿನಕಾಯಿ ತಟ್ಟೆಯಲ್ಲಿ ಜಾಸ್ತಿ ಕಂಡರೂ ಅಮ್ಮ ಅಯ್ಯೋ ಅಷ್ಟೊಂದು ಉಪ್ಪಿನಕಾಯಿ ಹಾಕೋಬಾರ್ದು ಅನ್ನೋದು ನೀವು ಕೇಳಿರಬಹುದು. ಹೌದು ವಿಟಮಿನ್ ಪ್ರೋಟಿನ್‌ಗಳು ಹೆಚ್ಚಾಗಿರುತ್ತವೆಂದು ಉಪ್ಪಿನಕಾಯಿ ಅತಿಯಾಗಿ ತಿನ್ನಬಾರದು. ಉಪ್ಪಿನಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಇರುವುದರಿಂದ ಮಿತಿಯಾಗಿ ಸೇವನೆ ಮಾಡಬೇಕು. ಇದರಿಂದ ಅಡ್ಡಪರಿಣಾಮಗಳೂ ಇವೆ. ಅವೇನು ನೋಡಿ.
ರಕ್ತದೊತ್ತಡದ ಬಗ್ಗೆ ಎಚ್ಚರ: ಉಪ್ಪಿನಕಾಯಿ ಎಂದರೇನೆ ಉಪ್ಪಿನಲ್ಲೇ ತಯಾರಿಸುವ ಪದಾರ್ಥ. ಹಾಗಾಗಿ ಉಪ್ಪಿನಕಾಯಿಯಲ್ಲಿ ಸೋಡಿಯಂ ತುಂಬಾ ಹೆಚ್ಚಾಗಿರುತ್ತದೆ. ಏಕೆ0ರೆ ಇದು ಬ್ರೈನಿಂಗ್ ಪ್ರಕ್ರಿಯೆಯ ಪ್ರಮುಖ ಭಾಗ. ಹೆಚ್ಚಿನ ಉಪ್ಪಿನಂಶದ ಸೇವನೆಯು ಅಧಿಕರಕ್ತದೊತ್ತಡಕ್ಕೆ ಕಾರಣವಾಗಬಹುದು. ಈಗಾಗಲೇ ಅಧಿಕ ರಕ್ತದೊತ್ತಡವಿರುವವರು, ಸೋಡಿಯಂ ಸೇವನೆ ಕಡಿಮೆ ಮಾಡಲು ಬಯಸುವವರು ಉಪ್ಪಿನಕಾಯನ್ನು ಮಿತವಾಗಿ ತಿನ್ನಬೇಕು.
ಯಕೃತ್ತು ಮತ್ತು ಮೂತ್ರಪಿಂಡದ ಮೇಲೆ ಅಧಿಕ ಒತ್ತಡ|:
ಹೆಚ್ಚು ಸೋಡಿಯಂ ಸೇವಿಸುವುದರಿಂದ ನಿಮ್ಮ ಮೂತ್ರಪಿಂಡ ಹಾಗೂ ಯಕೃತ್ತು ಹೆಚ್ಚು ಕೆಲಸ ಮಾಡುತ್ತೆ. ಇದಲ್ಲದೇ ಹೆಚ್ಚು ಸೋಡಿಯಂಯುಕ್ತ ಆಹಾರ ಸೇವನೆಯಿಂದಾಗುವ ಅಧಿಕ ರಕ್ತದೊತ್ತಡ ಈ ಅಂಗಗಳ ಮೇಲೆ ಇನ್ನಷ್ಟು ಒತ್ತಡವನ್ನುಂಟುಮಾಡುತ್ತದೆ. ಹಾಗಾಗಿ ಹೆಚ್ಚಿನ ಉಪ್ಪಿನಕಾಯಿಯ ಸೇವನೆ ಯಕೃತ್ತಿನ ಸಮಸ್ಯೆ ಅಥವಾ ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಅಪಾಯಕಾರಿ.
ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯ ಹೆಚ್ಚು :
ಸೋಡಿಯಂ ಅಧಿಕವಿರುವ ಆಹಾರ ಸೇವನೆ ಗ್ಯಾಸ್ಟ್ರಿಕ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸಬಹುದು. ಹೆಚ್ಚಿನ ಉಪ್ಪಿನಂಶ ಸೇವನೆಯು ನಿಮ್ಮ ಜೀರ್ಣಾಂಗವನ್ನು ನೇರವಾಗಿ ಹಾನಿಗೊಳಿಸುತ್ತೆ. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಥವಾ ಅಧಿಕ ಉಪ್ಪಿನಂಶಯುಕ್ತ ಆಹಾರ ಸೇವನೆಯು ಕ್ಯಾನ್ಸರ್ ಸೋಂಕು ಅಥವಾ ಹುಣ್ಣುಗಳಿಗೆ ಕಾರಣವಾಗಬಹುದು.
ಮೂಳೆಗಳ ಸವೆತ :
ಸೋಡಿಯಂ ಹೆಚ್ಚಿರುವ ಆಹಾರಗಳು ಮೂಳೆ ಸವೆತ ಅಂದರೆ ಆಸ್ಟಿಯೋಪೋರೋಸಿಸ್ ಅಪಾಯವನ್ನು ಹೆಚ್ಚಿಸಬಹುದು. ನಿಮ್ಮ ದೇಹವು ಹೆಚ್ಚು ಕ್ಯಾಲ್ಸಿಯಂ ಪಡೆಯದಿದ್ದರೆ ಹೆಚ್ಚಿನ ಪ್ರಮಾಣದ ಸೋಡಿಯಂ ನಿಮ್ಮ ಮೂಳೆಯನ್ನು ಕರಗಿಸಬಹುದು. ಇದು ದುರ್ಬಲ ಮೂಳೆಗಳಿಗೆ ಮತ್ತು ಮೂಳೆಯ ಸವೆತಕ್ಕೆ ಕಾರಣವಾಗುತ್ತದೆ. ಹಾಗಾಗಿ ಉಪ್ಪಿನಕಾಯಿ ತಟ್ಟೆಗೆ ಹಾಕಿಕೊಳ್ಳುವ ಮುನ್ನ ಸ್ವಲ್ಪ ಯೋಚನೆ ಮಾಡಿ.