ನವದೆಹಲಿ: ಡಿಜಿಟಲ್ ರೂಪಾಯಿಯನ್ನು ಈ ಹಣಕಾಸು ವರ್ಷದಲ್ಲೇ ಚಲಾವಣೆಗೆ ತರಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಬುಧವಾರ ತಿಳಿಸಿದೆ. ಡಿಜಿಟಲ್ ರೂಪಾಯಿಯನ್ನು ಸಾರ್ವತ್ರಿಕವಾಗಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಎಂದು ಗುರುತಿಸಲಾಗುತ್ತದೆ.
ಯೂಕ್ರೇನ್ ಸಮರ ನಡೆಯುತ್ತಿರುವ ಕಾರಣ ಹಣದುಬ್ಬರ ಜಗತ್ತಿನಾದ್ಯಂತ ಪಸರಿಸಿದೆ. ಪೂರೈಕೆ ಸರಪಳಿ ಸಮಸ್ಯೆಯಿಂದ ಹಿಡಿದು ನಾನಾ ರೀತಿಯ ಸಮಸ್ಯೆಗಳೊಂದಿಗೆ ಭಾರತದ ಅರ್ಥವ್ಯವಸ್ಥೆ ನಿತ್ಯವೂ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಗರಿಷ್ಠ ತಾಳುವಿಕೆ ಮಿತಿಯನ್ನು ಮೀರಿ ಹಣದುಬ್ಬರ ಏರುತ್ತಲೇ ಇದೆ. ಇದು ಕಳವಳಕಾರಿ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಸಹಕಾರಿ ಬ್ಯಾಂಕ್ಗಳಲ್ಲಿ ಗೃಹ ಸಾಲದ ಮಿತಿ ಏರಿಕೆ: ನಗರ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಲ್ಲಿ ಚಾಲ್ತಿಯಲ್ಲಿರುವ ವ್ಯಕ್ತಿಗತ ಹೌಸಿಂಗ್ ಲೋನ್ ಮಿತಿಯನ್ನು ಆರ್ಬಿಐ ದುಪ್ಪಟ್ಟುಗೊಳಿಸಿದೆ. ನಗರ ಸಹಕಾರಿ ಬ್ಯಾಂಕುಗಳಲ್ಲಿ ಈ ಮಿತಿಯನ್ನು 2011ರಲ್ಲಿ ಮತ್ತು ಗ್ರಾಮೀಣ ಸಹಕಾರಿ ಬ್ಯಾಂಕುಗಳಲ್ಲಿ ಈ ಮಿತಿಯನ್ನು 2009ರಲ್ಲಿ ಪರಿಷ್ಕರಿಸಲಾಗಿತ್ತು. ಒಂದು ಮತ್ತು ಎರಡನೇ ಸ್ತರದ ನಗರ ಸಹಕಾರಿ ಬ್ಯಾಂಕುಗಳಲ್ಲಿ ವ್ಯಕ್ತಿಗತ ಹೋಮ್ ಲೋನ್ ಅನ್ನು ಈಗ ಇರುವ 30 ಲಕ್ಷ ರೂಪಾಯಿಯಿಂದ 60 ಲಕ್ಷ ರೂಪಾಯಿಗೆ, 70 ಲಕ್ಷ ರೂಪಾಯಿಯಿಂದ 1.4 ಕೋಟಿ ರೂಪಾಯಿಗೆ ಏರಿಸಲಾಗಿದೆ. 100 ಕೋಟಿ ರೂಪಾಯಿಗಿಂತ ಕಡಿಮೆ ವಹಿವಾಟು ಹೊಂದಿರುವ ಗ್ರಾಮೀಣ ಸಹಕಾರಿ ಬ್ಯಾಂಕುಗಳಲ್ಲಿ ಹೋಮ್ ಲೋನ್ ಮಿತಿಯನ್ನು ಈಗ ಇರುವ 20 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಉಳಿದ ಗ್ರಾಮೀಣ ಸಹಕಾರಿ ಬ್ಯಾಂಕುಗಳಲ್ಲಿ ಹೋಮ್ ಲೋನ್ ಮಿತಿಯನ್ನು 30 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಯಿಂದ 75 ಲಕ್ಷ ರೂಪಾಯಿಗೆ ಏರಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಸõತ ಮಾಹಿತಿಯನ್ನು ಆರ್ಬಿಐ ಇನ್ನಷ್ಟೆ ಬಿಡುಗಡೆ ಮಾಡಬೇಕಿದೆ.
ಎಂಎಸ್ಎಫ್ ದರ ಏರಿಕೆ: ಮಾರ್ಜಿನಲ್ ಸ್ಟಾಯಂಡಿಂಗ್ ಫೆಸಿಲಿಟಿ (ಎಂಎಸ್ಎಫ್) ದರ ಮತ್ತು ಬ್ಯಾಂಕ್ ರೇಟ್ ಶೇ.4.65ರಿಂದ ಶೇ.5.15ಕ್ಕೆ ಏರಿಕೆ ಮಾಡಿರುವುದಾಗಿ ಆರ್ಬಿಐ ಹೇಳಿದೆ.
ಆಟೋ ಟ್ರಾನ್ಸಾಕ್ಷನ್ ಮಿತಿ ಏರಿಕೆ: ಆಟೋ ಟ್ರಾನ್ಸಾಕ್ಷನ್ ಮಿತಿಯನ್ನು ಆರ್ಬಿಐ ಈಗಿರುವ ರೂ. 5000 ದಿಂದ ರೂ.15,000ಕ್ಕೆ ಏರಿಸಿದೆ. ಇನ್ನು ಮುಂದೆ ಗ್ರಾಹಕರು 15,000 ರೂಪಾಯಿ ತನಕದ ವಹಿವಾಟಿಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ನೀಡಬೇಕಾಗಿಲ್ಲ. ಗ್ರಾಹಕರ ಅನುಕೂಲಕ್ಕಾಗಿ ನಿಯಮದ ಚೌಕಟ್ಟಿನಲ್ಲಿ ಮಿತಿ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು. ಈ ಸಂಬಂಧ ವಿಸõತವಾದ ಮಾರ್ಗಸೂಚಿಯನ್ನು ಆರ್ಬಿಐ ಶೀಘ್ರವೇ ಪ್ರಕಟಿಸುವ ನಿರೀಕ್ಷೆ ಇದೆ.
ನಾಲ್ಕನೇ ದಿನವೂ ಕುಸಿದ ಪೇಟೆ: ಷೇರುಪೇಟೆ ಸೂಚ್ಯಂಕಗಳು ಸತತ ನಾಲ್ಕನೇ ದಿನವೂ ಕುಸಿತ ಕಂಡಿವೆ. ಹಣದುಬ್ಬರದ ಅಪಾಯ ಮಾರುಕಟ್ಟೆಯಲ್ಲಿ ಪ್ರತಿಧ್ವನಿಸಿದೆ. ಬುಧವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 214.85 ಅಂಶ (0.39%) ಕುಸಿದು 54,892.49 ಅಂಶದಲ್ಲಿ, ಎನ್ಎಸ್ಇ ನಿಫ್ಟಿ 60.10 ಅಂಶ (0.37%) ಕುಸಿದು 16,356.25 ಅಂಶದಲ್ಲಿ ದಿನದ ವಹಿವಾಟು ಮುಗಿಸಿವೆ.
ಚಿನ್ನ, ಬೆಳ್ಳಿ ದರ ತುಸು ಏರಿಕೆ: ರಾಷ್ಟ್ರ ರಾಜಧಾನಿ ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ದರ 10 ಗ್ರಾಮಿಗೆ 30 ರೂಪಾಯಿ ಏರಿ 50,818 ರೂ., ಬೆಳ್ಳಿಯ ದರ ಒಂದು ಕಿಲೋಗೆ 133 ರೂಪಾಯಿ ಏರಿ 61,717 ರೂಪಾಯಿ ಆಗಿದೆ.
ರೂಪಾಯಿ ಮೌಲ್ಯ ವೃದ್ಧಿ: ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 3 ಪೈಸೆ ವೃದ್ಧಿಯಾಗಿ 77.75 ರೂಪಾಯಿ ಆಗಿದೆ. ದಿನದ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 77.70 ರೂಪಾಯಿಯಲ್ಲಿ ವಹಿವಾಟು ಆರಂಭಿಸಿತ್ತು. ಇಂಟ್ರಾ ಡೇ ವಹಿವಾಟಿನಲ್ಲಿ ದಿನದ ಗರಿಷ್ಠ 77.64 ರೂಪಾಯಿ ಮತ್ತು ಕನಿಷ್ಠ 77.79 ರೂಪಾಯಿ ದಾಖಲಾಗಿತ್ತು.