ಜಮ್ಮು: ಕಣಿವೆ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರು ಮತ್ತು ಸ್ಥಳೀಯಯೇತರ ಸರ್ಕಾರಿ ನೌಕರರ ಹತ್ಯೆ ಹಿನ್ನೆಲೆಯಲ್ಲಿ ತಮ್ಮ ತವರು ಜಿಲ್ಲೆಗಳಿಗೆ ಕೂಡಲೇ ಸ್ಥಳಾಂತರಿಸುವಂತೆ ಒತ್ತಾಯಿಸಿ ನೂರಾರು ಸರ್ಕಾರಿ ನೌಕರರು ಜಮ್ಮುವಿನಲ್ಲಿಂದು ಪ್ರತಿಭಟನೆ ನಡೆಸಿದರು.
ಕುಲ್ಗಾಮ್ ಜಿಲ್ಲೆಯಲ್ಲಿ ಮಂಗಳವಾರ ಉಗ್ರರಿಂದ ಹತ್ಯೆಗೀಡಾದ ಶಾಲಾ ಶಿಕ್ಷಕಿ ರಜನಿ ಬಾಲಾ ಅವರ ಫೋಟೋವಿರುವ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು, ತಮ್ಮ ತವರು ಜಿಲ್ಲೆಯಲ್ಲಿನ ವಿವಿಧ ಕಡೆಗಳಿಗೆ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದರು.
ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಸೂಕ್ತ ಭದ್ರತೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕರರು, ತಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟು ಹಿಡಿದಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಜಮ್ಮು-ಕಾಶ್ಮೀರದ ವಿವಿಧೆಡೆ ಕೆಲಸ ಮಾಡುತ್ತಿರುವ ಸುಮಾರು 8,000 ನೌಕರರು ಹೇಳಿದರು.
ಕಳೆದ 15 ವರ್ಷಗಳಿಂದ ಸೇವೆ ಮಾಡುತ್ತಿದ್ದೇವೆ, ಆದರೆ, ಉಗ್ರರ ಟಾರ್ಗೆಟ್ ನಿಂದಾಗಿ ಅಸುರಕ್ಷತೆ ಕಾಡುತ್ತಿದೆ ಎಂದು ಅನಂತ್ ನಾಗ್ ಜಿಲ್ಲೆಯಲ್ಲಿ ನಿಯೋಜಿತರಾಗಿರುವ ಶಿಕ್ಷಕ ರಮೇಶ್ ಚಂದ್ ಹೇಳಿದರು. ಮುಸ್ಲಿಂ, ಹಿಂದೂಗಳು ಮತ್ತು ಸಿಖರ್ ಸೇರಿದಂತೆ ಯಾರಿಗೂ ಕಣಿವೆ ಪ್ರದೇಶದಲ್ಲಿ ಭದ್ರತೆ ಇಲ್ಲದಂತಾಗಿದೆ ಎಂದು ಇತರ ಪ್ರತಿಭಟನಾಕಾರರು ಹೇಳಿದರು.