ಕುಂಬಳೆ: ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಆಸ್ಪತ್ರೆಗಳನ್ನು ರೋಗಿ ಸ್ನೇಹಿಯಾಗಿಸಲು ಮುಂದಿನ ದಿನಗಳಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ರಾಜ್ಯ ಸಹಕಾರ ಮತ್ತು ನೋಂದಣಿ ಸಚಿವ ವಿ.ಎನ್.ವಾಸವನ್ ತಿಳಿಸಿದರು.
ಕುಂಬಳೆಯಲ್ಲಿರುವ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ಅಳವಡಿಸಲಾದ ಸೋಲಾರ್ ಪ್ಲಾಂಟ್ ಉದ್ಘಾಟಿಸಿ ಅವರು ಮಾತನಾಡಿದರು.
ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಬೈಪಾಸ್ ಮತ್ತು ಆಂಜಿಯೋಪ್ಲಾಸ್ಟಿ ಸೇವೆ ನೀಡಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸಚಿವರು ಭರವಸೆ ನೀಡಿದರು. ಆಸ್ಪತ್ರೆಯಲ್ಲಿ 120 ಕಿಲೋವ್ಯಾಟ್ ಸೋಲಾರ್ ಪ್ಲಾಂಟ್ ಸ್ಥಾಪಿಸಲಾಗಿದೆ. ಕೊಚ್ಚಿ ಮೂಲದ ಟಿಸಿಎಂ ಸೋಲಾರ್ ಲಿಮಿಟೆಡ್ ಸಂಸ್ಥೆಯು 84 ಲಕ್ಷ ರೂಪಾಯಿ ವೆಚ್ಚದಲ್ಲಿ ಸೋಲಾರ್ ಪ್ಲಾಂಟ್ ಸ್ಥಾಪಿಸಿದೆ.
ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಕಾರ್ಯದರ್ಶಿ ಜಿ. ರತ್ನಾಕರ ವರದಿ ಮಂಡಿಸಿದರು. ಟಿಸಿಎಂ ಲಿಮಿಟೆಡ್ ಎಂಡಿ ಜೋಸೆಫ್ ವರ್ಗೀಸ್ ಇಳಂಜಿಕಲ್ ಅವರನ್ನು ಸನ್ಮಾನಿಸಲಾಯಿತು. ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ಸಹಕಾರಿ ವಲಯ ಅಧ್ಯಕ್ಷ ಕೆ.ಆರ್.ಜಯಾನಂದ, ಕುಂಬಳೆ ವಿದ್ಯುತ್ ಕಚೇರಿ ಎಇ ವಿ.ವಿ.ರಾಜೀವನ್, ಮಂಜೇಶ್ವರ ಸಹಾಯಕ ರಿಜಿಸ್ಟ್ರಾರ್ ನಾಗೇಶ್, ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆಯ ಮಾಜಿ ಅಧ್ಯಕ್ಷ ಎ.ಕೆ. ಚಂದ್ರಶೇಖರನ್, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಸಿ.ಎ.ಸುಬೈರ್, ರವಿ ಪೂಜಾರಿ, ತಾಜುದ್ದೀನ್ ಮೊಗ್ರಾಲ್, ಸುಜಿತ್ ರೈ ಮಾತನಾಡಿದರು. ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಅಧ್ಯಕ್ಷ ಪಿ. ರಘುದೇವನ್ ಸ್ವಾಗತಿಸಿ, ಜಿಲ್ಲಾ ಸಹಕಾರಿ ಆಸ್ಪತ್ರೆ ಉಪಾಧ್ಯಕ್ಷ ಎಂ. ಸುಮತಿ ವಂದಿಸಿದರು.