HEALTH TIPS

ಇನ್ನು ಮುಂದೆ ಮಾಂಸ, ಮೊಸರಿಗೂ ಜಿಎಸ್‌ಟಿ!

 ಚಂಡೀಗಡ: ಪ್ಯಾಕ್ ಮಾಡಲಾಗಿರುವ, ಲೇಬಲ್ ಇರುವ ಆಹಾರ ವಸ್ತುಗಳಾದ ಮಾಂಸ, ಮೀನು, ಮೊಸರು, ಪನ್ನೀರ್ ಮತ್ತು ಜೇನುತುಪ್ಪಕ್ಕೆ ಇನ್ನು ಮುಂದೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ.

ಯಾವೆಲ್ಲ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ಇಲ್ಲವಾಗಿಸಬಹುದು ಎಂಬುದನ್ನು ಪರಿಶೀಲಿಸಲು ರಚಿಸಲಾಗಿದ್ದ ಸಚಿವರ ಸಮಿತಿಯ ಶಿಫಾರಸುಗಳನ್ನು ಜಿಎಸ್‌ಟಿ ಮಂಡಳಿ ಒಪ್ಪಿಕೊಂಡಿರುವ ಕಾರಣ, ಈ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ, ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಸದಸ್ಯರಾಗಿರುವ ಮಂಡಳಿಯು ಈ ಶಿಫಾರಸುಗಳನ್ನು ಒಪ್ಪಿಕೊಂಡಿದೆ. ಪ್ಯಾಕ್‌ ಮಾಡಿರುವ, ಲೇಬಲ್ ಇರುವ, ಬ್ರ್ಯಾಂಡೆಡ್‌ ಅಲ್ಲದ ಆಹಾರ ವಸ್ತುಗಳಿಗೆ ಇದುವರೆಗೆ ಜಿಎಸ್‌ಟಿ ವಿನಾಯಿತಿ ಇತ್ತು.


ಶಿಫಾರಸುಗಳನ್ನು ಮಂಡಳಿ ಒಪ್ಪಿಕೊಂಡಿರುವ ಪರಿಣಾಮವಾಗಿ ಪ್ಯಾಕ್ ಆಗಿರುವ, ಲೇಬಲ್ ಇರುವ ಮಾಂಸ (ಫ್ರೀಜ್‌ ಮಾಡಿದ ಮಾಂಸ ಹೊರತುಪಡಿಸಿ), ಮೀನು, ಮೊಸರು, ಪನ್ನೀರ್, ಜೇನುತುಪ್ಪ, ಫಾಕ್ಸ್‌ನಟ್ (ಮಖಾನಾ), ಗೋಧಿ ಮತ್ತು ಇತರ ಏಕದಳ ಧಾನ್ಯಗಳು, ಗೋಧಿ ಹಿಟ್ಟು, ಬೆಲ್ಲ, ಮಂಡಕ್ಕಿ ಇನ್ನು ಮುಂದೆ ಶೇಕಡ 5ರಷ್ಟು ತೆರಿಗೆ ವ್ಯಾಪ್ತಿಗೆ ಬರಲಿವೆ. ಸಾವಯವ ಗೊಬ್ಬರಕ್ಕೂ ಇಷ್ಟೇ ಪ್ರಮಾಣದ ತೆರಿಗೆ ಅನ್ವಯವಾಗಲಿದೆ.

 ಬ್ಯಾಂಕ್‌ಗಳು ಚೆಕ್‌ ಸೌಲಭ್ಯ (ಚೆಕ್‌ ಬುಕ್ ಅಥವಾ ಚೆಕ್ ಲೀಫ್) ನೀಡುವುದಕ್ಕೆ ವಿಧಿಸುವ ಶುಲ್ಕದ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಅಟ್ಲಾಸ್ ಸೇರಿದಂತೆ ನಕಾಶೆಗಳು ಮತ್ತು ಚಾರ್ಟ್‌ಗಳಿಗೆ ಶೇಕಡ 12ರಷ್ಟು ತೆರಿಗೆ ಕೊಡಬೇಕಾಗುತ್ತದೆ. ಪ್ಯಾಕ್‌ ಮಾಡಿರದ, ಲೇಬಲ್‌ ಇಲ್ಲದ ಹಾಗೂ ಯಾವುದೇ ಬ್ರ್ಯಾಂಡ್ ಇರದ ಉತ್ಪನ್ನಗಳಿಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗಿನಂತೆಯೇ ತೆರಿಗೆ ವಿನಾಯಿತಿ ಮುಂದುವರಿಯಲಿದೆ.

ದಿನಕ್ಕೆ ₹ 1,000ಕ್ಕಿಂತ ಕಡಿಮೆ ಶುಲ್ಕ ವಿಧಿಸುವ ಹೋಟೆಲ್‌ ಕೊಠಡಿಗಳ ಮೇಲೆ ಶೇ 12ರಷ್ಟು ತೆರಿಗೆ ವಿಧಿಸಲಾಗುತ್ತದೆ. ಈವರೆಗೆ ಇಂತಹ ಕೊಠಡಿಗಳಿಗೆ ತೆರಿಗೆಯಿಂದ ವಿನಾಯಿತಿ ಇತ್ತು.

ಕೆಲವು ಉತ್ಪನ್ನಗಳ ತಯಾರಿಕೆಯಲ್ಲಿ ಬಳಕೆಯಾಗುವ ಕಚ್ಚಾ ವಸ್ತುಗಳಿಗೆ ತೆರಿಗೆ ಜಾಸ್ತಿ ಇದ್ದು, ಅವುಗಳನ್ನು ಬಳಸಿ ಸಿದ್ಧಪಡಿಸುವ ಉತ್ಪನ್ನಗಳಿಗೆ ಜಿಎಸ್‌ಟಿ ಅಡಿಯಲ್ಲಿ ಕಡಿಮೆ ತೆರಿಗೆ ಇದೆ. ಅಡುಗೆ ಎಣ್ಣೆ, ಎಲ್‌ಇಡಿ ದೀಪ, ಮುದ್ರಣ ಶಾಯಿ, ಸೌರವಿದ್ಯುತ್ ಚಾಲಿತ ವಾಟರ್ ಹೀಟರ್‌ಗಳು ಇಂತಹ ತೆರಿಗೆ ಪ್ರಮಾಣದ ಅಡಿಯಲ್ಲಿ ಇವೆ. ಇವುಗಳಿಗೆ ವಿಧಿಸುತ್ತಿರುವ ತೆರಿಗೆ ಪ್ರಮಾಣವನ್ನು ಸರಿಪಡಿಸಬೇಕು ಎಂದು ಮಂಡಳಿಯು ಶಿಫಾರಸು ಮಾಡಿದೆ.

ಕ್ಯಾಸಿನೊ, ಆನ್‌ಲೈನ್ ಆಟಗಳು ಮತ್ತು ಕುದುರೆ ರೇಸ್‌ಗೆ ಶೇ 28ರಷ್ಟು ತೆರಿಗೆ ವಿಧಿಸಬೇಕು ಎಂದು ಪ್ರಸ್ತಾವನೆ ಕುರಿತು ಮಂಡಳಿಯು ಬುಧವಾರ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

₹ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಮತ್ತು ಚಿನ್ನದ ಆಭರಣಗಳನ್ನು, ಅಮೂಲ್ಯ ಹರಳುಗಳನ್ನು ರಾಜ್ಯದೊಳಗೆ ಸಾಗಾಟ ಮಾಡುವಾಗ, ಇ-ವೇ ಬಿಲ್ ಕಡ್ಡಾಯಗೊಳಿಸಬೇಕು ಎಂದು ಸಚಿವರ ಸಮಿತಿಯೊಂದು ಶಿಫಾರಸು ಮಾಡಿತ್ತು. ಎಷ್ಟು ಮೊತ್ತಕ್ಕಿಂತ ಹೆಚ್ಚಿನ ಆಭರಣ, ಅಮೂಲ್ಯ ಹರಳುಗಳ ಸಾಗಾಟಕ್ಕೆ ಇ-ವೇ ಬಿಲ್ ಕಡ್ಡಾಯ ಎಂಬುದನ್ನು ರಾಜ್ಯಗಳೇ ತೀರ್ಮಾನಿಸಬಹುದು ಎಂದು ಜಿಎಸ್‌ಟಿ ಮಂಡಳಿಯು ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries