ಕಾಸರಗೋಡು: ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದಂತೆ ಪೊಲೀಸರು ಬೀದಿಕಾಮಣ್ಣರ ನಿಯಂತ್ರಣಕ್ಕೆ ವಿಶೇಷ ಯೋಜನೆ ಆರಂಭಿಸಿದ್ದಾರೆ. ಇದಕ್ಕಾಗಿ ಕರಾಟೆಯಲ್ಲಿ ಪಳಗಿರುವ ಮಹಿಳಾ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ!
ವಿಶೇಷ ತಂಡವನ್ನು ರಚಿಸಿಕೊಂಡು, ನಗರ ಹಾಗೂ ಹೊರ ವಲಯದಲ್ಲಿ ಬೀದಿಕಾಮಣ್ಣರು ಠಿಕಾಣಿ ಹೂಡುವ ಸ್ಥಳವನ್ನು ಗುರುತಿಸಿಕೊಂಡು, ಅಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿಯರಿಗೆ ಹಾಗೂ ಯುವತಿಯರನ್ನು ಚುಡಾಯಿಸುವುದು, ಕಿರುಕುಳ ನೀಡುತ್ತಿರುವುದು ಕಂಡು ಬಂದರೆ, ತಂಡ ತಕ್ಷಣ ಸೆರೆಹಿಡಿಯಲಿದ್ದಾರೆ. ಬಸ್ಸುಗಳಲ್ಲಿ, ಬಸ್‍ನಿಲ್ದಾಣ, ಶಾಲಾ ವಠಾರ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲೂ ಈ ತಂಡ ಕಾರ್ಯಾಚರಿಸಲಿದೆ. ವಿದ್ಯಾರ್ಥಿನಿಯರು ಅತಿಹೆಚ್ಚು ಓಡಾಟ ನಡೆಸುವ ಪ್ರದೇಶಗಳನ್ನು ಪೊಲೀಸರು ಗುರುತಿಸಿಕೊಂಡು, ಅಲ್ಲಿ ಮಾರುವೇಷದ ಮಹಿಳಾ ಪೊಲೀಸರನ್ನು ನಿಯೋಜಿಸಲಿದ್ದಾರೆ. ಬೆಳಗ್ಗೆ, ಮಧ್ಯಾಃನ ಹಾಗೂ ಸಂಜೆ ವೇಳೆ ವಿದ್ಯಾರ್ಥಿನಿಯರು ಹೆಚ್ಚಾಗಿ ಓಡಾಟ ನಡೆಸುವ ಪ್ರದೇಶಗಳಲ್ಲಿ ಬೀದಿಕಾಮಣ್ಣರ ಕಿರುಕುಳ ಹೆಚ್ಚಾಗುತ್ತಿರುವ ಬಗ್ಗೆ ಲಭಿಸಿದ ದೂರಿನ ಹಿನ್ನೆಲೆಯಲ್ಲಿ ಈ ವಿಷೇಷ ಪೊಲೀಸ್ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾಸರಗೋಡು, ವಿದ್ಯಾನಗರಮ ಜಯಂಬಳೆ, ಬದಿಯಡ್ಕ, ಮುಳ್ಳೇರಿಯ, ಉಪ್ಪಳ, ಮಂಜೇಶ್ವರ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಕಾರ್ಯಾಚರಣೆ ನಡೆಯಲಿದೆ.