ಮಂಜೇಶ್ವರ : ಜೂನ್ ಮೊದಲ ದಿನಗಳಲ್ಲಿ ನಡೆಯುತ್ತಿದ್ದ ಶಾಲಾ ಪ್ರವೇಶೋತ್ಸವ ಕಳೆದ ಎರಡು ವರ್ಷಗಳಲ್ಲಿ ಕೊರೋನ ಸಂಧಿಗ್ಧ ಪರಿಸ್ಥಿತಿಯಲ್ಲಿ ನಡೆಸಲು ಸಾಧ್ಯವಾಗಿರಲಿಲ್ಲ. ಆ ನೋವನ್ನು ಮರೆಸುವಂತೆ ಈ ವರ್ಷ ಹೊಸ ಹುರುಪಿನೊಂದಿಗೆ, ನವೀನ ಚಿಂತನೆಗಳೊಂದಿಗೆ ಕಾಲಿಟ್ಟ ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಳ್ಳಲು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರವೇಶೋತ್ಸವವನ್ನು ವಿಶೇಷವಾಗಿ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ನವಾಗತ ಮಕ್ಕಳನ್ನು ಪರಿಸರ ಸ್ನೇಹಿಯಾಗಿ ಅಲಂಕಾರದಿಂದ ಶಾಲೆಯು ಸ್ವಾಗತಿಸಿತು. ಮಕ್ಕಳಿಗೆ ಕಿರೀಟ ಧರಿಸಿ, ಬಲೂನ್ ನೀಡಿ ಶಾಲಾ ಶಿಕ್ಷಕ ವೃಂದ ಹಾಗೂ ಅತಿಥಿಗಳು ತರಗತಿಗಳಿಗೆ ಕರೆತಂದರು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಮೀಂಜ ಪಂಚಾಯತು ಸದಸ್ಯರಾದ ಜನಾರ್ದನ ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹೇರಂಭ ಇಂಡಸ್ಟ್ರೀಸ್ ಮುಂಬೈ ಇದರ ಸ್ಥಾಪಕಾಧ್ಯಕ್ಷರು ಹಾಗೂ ಶಾಲಾ ಹಳೆ ವಿದ್ಯಾರ್ಥಿಯೂ ಆಗಿರುವ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಆಗಮಿಸಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಹಮ್ಮದ್ ಹಾಜಿ ಕಂಚಿಲ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ನಾರಾಯಣ ನೈಕ್ ನಡುಹಿತ್ಲು, ಮಜಿಬೈಲ್ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷರಾದ ಮಮ್ಮುuಟಿಜeಜಿiಟಿeಜ ಹಾಜಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು ಕೊಡುಗೆಯಾಗಿ ನೀಡಿದ ಬ್ಯಾಗ್, ಪುಸ್ತಕ ಹಾಗೂ ಸಮವಸ್ತ್ರಗಳನ್ನು ಅತಿಥಿಗಳು ಮಕ್ಕಳಿಗೆ ವಿತರಿಸಿದರು. ಕೊಡುಗೆ ನೀಡಿದ ಸ್ನೇಹ ಆಟ್ರ್ಸ್ & ಸ್ಪೋಟ್ರ್ಸ್ ಕ್ಲಬ್ ಶಾಂತಿನಗರ ಕುಳೂರು, ಟೀಮ್ ಅಘೋರ ಕುಳೂರು, ನಿತ್ಯಾನಂದ ಭಜನಾ ಮಂದಿರ ಕುಳೂರು, ನವಯುವಕ ಕಲಾ ವೃಂದ ಚಿನಾಲ, ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘಗಳಿಗೆ ಶಾಲಾ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. 2022-23 ನೇ ಸಾಲಿನ ಶಾಲಾ ಅಕಾಡೆಮಿಕ್ ಮಾಸ್ಟರ್ ಪ್ಲಾನ್ ನ್ನು ಶಾಲಾ ಶಿಕ್ಷಕಿ ನಯನ ಎಂ ಮಂಡಿಸಿದರು.
ಶಾಲಾ ಶಿಕ್ಷಕಿ ಸೌಮ್ಯ ಪಿ ಸ್ವಾಗತಿಸಿ, ಶಿಕ್ಷಕಿ ನಯನ ಎಂ ವಂದಿಸಿದರು. ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಂಘ ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.