ಮುಳ್ಳೇರಿಯ: ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ 'ಯಕ್ಷ ಗಾನ ವೈಭವ ಮತ್ತು ಮೋಕ್ಷ ಸಂಗ್ರಾಮ' ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಜರಗಿತು. ಕಲಾಸಂಘದ ಹಿರಿಯ ಮದ್ದಳೆಗಾರ ಮಂಡೆಕೋಲು ಅಪ್ಪಯ್ಯ ಮಣಿಯಾಣಿ ಅವರ ಪ್ರಾಯೋಜಕತ್ವದಲ್ಲಿ ಸೇವಾರೂಪವಾಗಿ ಪ್ರಸ್ತುತಗೊಂಡ ಕಲಾ ಕಾರ್ಯಕ್ರಮದ ಮೊದಲಿಗೆ ಸ್ಥಳಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ದೇವರಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು. ಇದೇ ಸಂದರ್ಭ ಭಾಗವತ ಬನಾರಿಯವರು ಮಾ. ತನುಷ್ ಜಾಲ್ಸೂರು ಅವರ ಪ್ರಥಮ ರಂಗಪ್ರವೇಶಕ್ಕೆ ಚಾಲನೆ ನೀಡಿದರು.
ಉದಯೋನ್ಮುಖ ಪ್ರತಿಭಾ ಭಾಗವತರಾದ ನಿತೀಶ್ ಕುಮಾರ್ ಎಂಕಣ್ಣಮೂಲೆ ಮತ್ತು ಅಭಿಜ್ಞಾ ಭಟ್ ನಾಟಿಕೇರಿ ಅವರ ಹಾಡುಗಾರಿಕೆಗೆ ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಅವರು ಚೆಂಡೆ ಮದ್ದಳೆ ವಾದನದಲ್ಲಿ ಸಹಕರಿಸಿದರು. . ಲತಾ ಆಚಾರ್ಯ ಬನಾರಿ ಅವರ ನಿರೂಪಣೆಯೊಂದಿಗೆ ವಿಶ್ವವಿನೋದ ಬನಾರಿಯವರ ನಿರ್ದೇಶನದಲ್ಲಿ ಮನೋಜ್ಞವಾಗಿ ಮೂಡಿಬಂದ ಈ ಯಕ್ಷಗಾನ ರಸಧಾರೆಯು ನವೀನ ರೀತಿಯಿಂದ ವಿಜೃಂಭಿಸಿತು.
ಬಳಿಕ ನಡೆದ ಯಕ್ಷಗಾನ ತಾಳಮದ್ದಳೆ 'ಮೋಕ್ಷಸಂಗ್ರಾಮ'ದ ಹಿಮ್ಮೇಳ ಮುಮ್ಮೇಳಗಳಲ್ಲಿ ಯಕ್ಷಗುರು ದಿವಾಣ ಶಿವಶಂಕರ ಭಟ್, ಕಲ್ಲಡ್ಕ ಶಿವರಾಮ ಕಲ್ಲೂರಾಯ, ಡಿ. ವೆಂಕಟ್ರಮಣ ಮಾಸ್ತರ್ ದೇಲಂಪಾಡಿ, ದಯಾನಂದ ಗೌಡ ಬಂದ್ಯಡ್ಕ, ದಯಾನಂದ ಪಾಟಾಳಿ ಮಯ್ಯಾಳ, ಮುದಿಯಾರು ಐತ್ತಪ್ಪ ಗೌಡ, ಎಂ.ರಮಾನಂದ ರೈ ದೇಲಂಪಾಡಿ, ರಾಮಣ್ಣ ಮಾಸ್ತರ್ ದೇಲಂಪಾಡಿ, ನಾರಾಯಣ ಮಾಸ್ತರ್ ದೇಲಂಪಾಡಿ, ಸದಾನಂದ ಪೂಜಾರಿ ಮಯ್ಯಾಳ, ನಾರಾಯಣ ಪಾಟಾಳಿ ಮಯ್ಯಾಳ, ರಾಮನಾಯ್ಕ ದೇಲಂಪಾಡಿ, ಕಲ್ಲಡ್ಕ ಗುತ್ತು ರಾಮಯ್ಯ ರೈ, ಸಂಜೀವ ರಾವ್ ಮಯ್ಯಾಳ, ಗೋಪಾಲಕೃಷ್ಣ ಮುದಿಯಾರು, ಜೀವಿಕಾ ಬಂದ್ಯಡ್ಕ, ಬಿ.ಹೆಚ್ ವೆಂಕಪ್ಪ ಗೌಡ, ತುಳಸಿ ಜಾಲ್ಸೂರು ಅವರು ಭಾಗವಹಿಸಿದರು. ರೋಹಿಣಿ ಎಸ್ ದಿವಾಣ, ಮಹಾಲಿಂಗೇಶ್ವರ ಭಟ್ ನಾಟಿಕೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಸರೋಜಿನಿ ಬನಾರಿ ಸ್ವಾಗತಿಸಿ, ನಂದಕಿಶೋರ ಬನಾರಿ ವಂದಿಸಿದರು.