ಬದಿಯಡ್ಕ: ಹತ್ತನೇ ತರಗತಿ ಎನ್ನುವುದು ಶಿಕ್ಷಣದ ಮೊದಲ ಪ್ರಮುಖ ಘಟ್ಟ. ಇದರಲ್ಲಿ ಪಡೆದ ಅಂಕ ಮುಂದಿನ ಕಲಿಕೆಗೆ ಸ್ಫೂರ್ತಿಯಾಗಬೇಕು ಎಂದು ಬದಿಯಡ್ಕ ಸಬ್ ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಅವರು ನುಡಿದರು.
ಪೆರಡಾಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಳೆದ ವರ್ಷ ನೂರು ಶೇಕಡಾ ಫಲಿತಾಂಶ ಪಡೆದ ಮಕ್ಕಳ ತಂಡವನ್ನು ರಕ್ಷಕ ಶಿಕ್ಷಕ ಸಂಘದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ನಿರ್ಮಲ ಕುಮಾರ್ ಮಕ್ಕಳನ್ನು ಅಭಿನಂದಿಸಿ ಸಾಧಿಸುವ ಹಂಬಲ, ಪರಿಶ್ರಮದ ಬಲದಿಂದ ಇನ್ನಷ್ಟು ಸಾಧನೆ ಮಾಡಬೇಕು. ಶಿಕ್ಷಕರ, ರಕ್ಷಕರ ಮನಮೆಚ್ಚುವ ವರ್ತನೆ ಬೆಳೆಸಬೇಕು ಎಂದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಕರೋಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮೊಯ್ದು, ಮಾತೃ ರಕ್ಷಕ ಅಧ್ಯಕ್ಷೆ ಮೇರಿ ಸಿಜೊ, ಸದಸ್ಯರಾದ ನೌಫಲ್, ಶರೀಫ್,ಅಬ್ದುಲ್ಲ, ಮೊಹಮ್ಮದ್ ಶುಭಾಶಂಸನೆಗೈದರು. ಶಾಲಾ ಮುಖ್ಯ ಶಿಕ್ಷಕ ರಾಜಗೋಪಾಲ್ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕರಾದ ರಿಷಾದ್, ಬೀನಾ, ದುರ್ಗಾ ಪರಮೇಶ್ವರಿ ಶುಭ ಹಾರೈಸಿದರು. ಮಕ್ಕಳಾದ ಫಾತಿಮಾತ್ ಸಫಾ, ಅನುಶ್ರೀ ಅನಿಸಿಕೆ ವ್ಯಕ್ತಪಡಿಸಿದರು.ಗೈಡ್ ರಾಜ್ಯ ಪುರಸ್ಕಾರ ಪಡೆದ ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು. ಸಮಿತಿ ಸದಸ್ಯ ಸುಂದರ ಬಾರಡ್ಕ ವಂದಿಸಿದರು. ಶಿಕ್ಷಕ ಹಶೀಮ್ ಅಡ್ಕಸ್ತಳ ಕಾರ್ಯಕ್ರಮ ನಿರೂಪಿಸಿದರು.