ಪಾಲಂ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಂಗಿದ್ದ ಜಾರ್ಖಂಡ್ ಜಿಲ್ಲೆಯ ಪಾಲಂ ಜಿಲ್ಲೆಯ ಸರ್ಕಿಟ್ ಹೌಸ್ ನ ಕೊಠಡಿಯೊಂದರಲ್ಲಿ ಇಂದು ಬೆಳಗ್ಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅವರು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
73 ವರ್ಷದ ಲಾಲು ಪ್ರಸಾದ್ ಯಾದವ್ ಬೆಳಗ್ಗೆ ಸುಮಾರು 8 ಗಂಟೆ ವೇಳೆಯಲ್ಲಿ ಉಪಹಾರ ಸೇವಿಸುತ್ತಿದ್ದಾಗ ಗೋಡೆಯಲ್ಲಿ ಹಾಕಿದ್ದ ಫ್ಯಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅವರ ಆಪ್ತರು ಬೆಂಕಿ ನಂದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಘಟನೆ ನಂತರ ಕೊಠಡಿ ಆವರಣಕ್ಕೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲಾಯಿತು ಎಂದು ಜಿಲ್ಲಾಧಿಕಾರಿ ಶಶಿರಂಜನ್ ತಿಳಿಸಿದ್ದಾರೆ. ಘಟನೆಯಿಂದ ಯಾರಿಗೂ ತೊಂದರೆಯಾಗಿಲ್ಲ, ತೀವ್ರಗತಿಯ ಯಾವುದೇ ಹಾನಿಯಾಗಿಲ್ಲ ಎಂದು ವರದಿಗಳು ಹೇಳಿವೆ. ಸರ್ಟ್ ಸರ್ಕ್ಯೂಟ್ ನ್ನು ಸರಿಪಡಿಸಲಾಗುತ್ತಿದೆ. ಬೆಂಕಿ ಹೊತ್ತಿಕೊಂಡ ಪ್ಯಾನ್ ನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.
ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ 13 ವರ್ಷ ಹಳೆಯದಾದ ಪ್ರಕರಣದಲ್ಲಿ ವಿಶೇಷ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಲು ಲಾಲು ಪ್ರಸಾದ್ ಯಾದವ್ ಪಾಲಂ ಜಿಲ್ಲೆಯ ಜಿಲ್ಲಾ ಕೇಂದ್ರ ಮೇದಿನಿ ನಗರಕ್ಕೆ ಸೋಮವಾರ ಆಗಮಿಸಿದರು.