ನವದೆಹಲಿ:ಗುಜರಾತ್ ಗಲಭೆ, ತುರ್ತು ಪರಿಸ್ಥಿತಿ ಹಾಗೂ ಶೀತಲ ಸಮರದ ಕುರಿತ ಭಾಗವನ್ನು ಎನ್‌ಸಿಇಆರ್‌ಟಿಯ 12ನೇ ತರಗತಿಯ ಪಠ್ಯ ಪುಸ್ತಕದಿಂದ ಕೈಬಿಡಲಾಗಿದೆ. ಇದನ್ನು ಪಠ್ಯಕ್ರಮಗಳ ತರ್ಕಬದ್ಧಗೊಳಿಸುವ ಪ್ರಕ್ರಿಯೆ ಎಂದು ಎನ್‌ಸಿಇಆರ್‌ಟಿ ಕರೆದಿದೆ.
ಇದಲ್ಲದೆ, ಕ್ರಾಂತಿಕಾರಿ ಕವಿ ಫೈಝ್ ಅಹ್ಮದ್ ಫೈಝ್ ಅವರ ದ್ವಿಪದಿಗಳನ್ನು 10ನೇ ತರಗತಿಯ ಪಠ್ಯ ಪುಸ್ತಕದಿಂದ ಕೈ ಬಿಡಲಾಗಿದೆ ಎಂದು ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಪಠ್ಯಕ್ರಮದ ದಾಖಲೆಗಳು ತಿಳಿಸಿವೆ.
ಮೊಗಲರ ಇತಿಹಾಸದ ಅಧ್ಯಾಯ, ದಲಿತ ಲೇಖಕರ ಉಲ್ಲೇಖವನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಲಾಗಿದೆ. ಈ ಪರಿಷ್ಕೃತ ಪಠ್ಯವನ್ನು ಜುಲೈಯಲ್ಲಿ ಆರಂಭವಾಗುವ 2022-23 ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ.
6ರಿಂದ 12ನೇ ತರಗತಿ ವರೆಗಿನ ಎಲ್ಲಾ ವಿಷಯಗಳ ಪಠ್ಯ ಪುಸ್ತಕಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಎನ್‌ಸಿಇಆರ್‌ಟಿ ಗುರುವಾರ ಬಿಡುಗಡೆ ಮಾಡಿದ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಹೇಳಿಕೆ ತೆಗೆದುಹಾಕಲಾದ ಪಠ್ಯದ ಪಟ್ಟಿಯನ್ನು ಕೂಡ ಒಳಗೊಂಡಿದೆ. ವಿಷಯದ ಅತಿ ವ್ಯಾಪ್ತಿ ಹಾಗೂ ಅಪ್ರಸಕ್ತತೆ ಈ ಪಠ್ಯಗಳನ್ನು ತೆಗೆದು ಹಾಕಲು ಕಾರಣ ಎಂದು ಎನ್‌ಸಿಇಆರ್‌ಟಿ ಹೇಳಿದೆ.
ಈ ಪರಿಷ್ಕರಣೆ ಕಳೆದ ಕೆಲವು ತಿಂಗಳುಗಳಿಂದ ಭಾರತದಾದ್ಯಂತದ ಶಾಲಾ ಪಠ್ಯಗಳಿಗೆ ಮಾಡಿದ ಬದಲಾವಣೆಗಳ ಸರಣಿಯಲ್ಲಿ ಇತ್ತೀಚೆಗಿನದ್ದು. ಈ ಬದಲಾವಣೆಯನ್ನು ಕೆಲವು ರಾಜ್ಯಗಳು ನೂತನ ಶಿಕ್ಷಣ ನೀತಿ (ಎನ್‌ಇಪಿ)ಯ ಹೆಸರಲ್ಲಿ ಸಮರ್ಥಿಸಿಕೊಂಡಿವೆ.
12ನೇ ತರಗತಿಯ ಪಠ್ಯ ಪುಸ್ತಕ 'ಸ್ವಾತಂತ್ರ್ಯದ ಬಳಿಕ ಭಾರತದ ರಾಜಕೀಯ' ದಲ್ಲಿ ಗುಜರಾತ್ ಗಲಭೆ ಭಾಗವನ್ನು ತೆಗೆದು ಹಾಕಲಾಗಿದೆ. ಈ ಭಾಗವನ್ನು ''ಭಾರತೀಯ ರಾಜಕೀಯದಲ್ಲಿ ಇತ್ತೀಚೆಗಿನ ಬೆಳವಣಿಗೆ'' ಶೀರ್ಷಿಕೆಯ ಅಧ್ಯಾಯದಲ್ಲಿ ಸೇರಿಸಲಾಗಿದೆ.
12ನೇ ತರಗತಿಯ ಪಠ್ಯ ಕ್ರಮದಿಂದ ತೆಗೆದು ಹಾಕಲಾದ ಅಂಶಗಳಲ್ಲಿ ಇತಿಹಾಸ ಪಠ್ಯ ಪುಸ್ತಕದ 'ಮೊಗಲ ಆಸ್ಥಾನ' ಅಧ್ಯಾಯ ಸೇರಿದೆ. ಅಲ್ಲದೆ, ರಾಜಕೀಯ ವಿಜ್ಞಾನ ಪಠ್ಯ ಪುಸ್ತಕದಿಂದ 'ದಲಿತ ಚಳವಳಿ' ಎಂಬ ಶೀರ್ಷಿಕೆಯ ಕವನ ಹಾಗೂ 'ಶೀತಲ ಸಮರ' ಕುರಿತ ಅಧ್ಯಾಯವನ್ನು ಕೈ ಬಿಡಲಾಗಿದೆ.
11ನೇ ತರಗತಿಯ ಇತಿಹಾಸ ಪಠ್ಯ ಪುಸ್ತಕದಿಂದ 'ಇಸ್ಲಾಮಿನ ಕೇಂದ್ರೀಯ ನೆಲಗಳು' ಹಾಗೂ 'ಕೈಗಾರಿಕಾ ಕ್ರಾಂತಿ' ಶೀರ್ಷಿಕೆಯ ಪಠ್ಯಗಳನ್ನು ತೆಗೆದು ಹಾಕಲಾಗಿದೆ.
''ಇದು ಪಠ್ಯ ಕ್ರಮವನ್ನು ತರ್ಕಬದ್ಧಗೊಳಿಸುವ ಪ್ರಕ್ರಿಯೆ. ಇದನ್ನು ಸಾಕಷ್ಟು ಚರ್ಚೆಯ ಬಳಿಕ ತುಂಬಾ ಜಾಗರೂಕತೆಯಿಂದ ಮಾಡಲಾಗಿದೆ. ಯಾವುದನ್ನು ತೆಗೆದು ಹಾಕಲಾಗಿದೆಯೋ ಅದು ಪುನರಾವರ್ತಿತವಾಗಿದೆ ಅಥವಾ ಪ್ರಸ್ತುತವಾಗಿಲ್ಲ'' ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಣ ಸಚಿವಾಲಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.