ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮೊದಲ ಆರೋಪಿಯ ಬಂಧನವನ್ನ ಮಂಗಳವಾರ ಖಚಿತಪಡಿಸಿದ್ದಾರೆ. ಆರೋಪಿ ಮನ್‌ಪ್ರೀತ್‌ನನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಮನ್‌ಪ್ರೀತ್‌ನನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಹೊಣೆ ಹೊತ್ತಿರುವ ಕ್ರಿಮಿನಲ್ ಗ್ಯಾಂಗ್‌ನ ನಾಯಕ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ಗೆ ದೆಹಲಿಯ ತಿಹಾರ್ ಜೈಲಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್ ಪೊಲೀಸರು ತನ್ನನ್ನು ನಕಲಿ ಎನ್‌ಕೌಂಟರ್ ನಲ್ಲಿ ಹತ್ಯೆ ಮಾಡುವ ಸಾಧ್ಯತೆ ಇದೆ ಎಂದಿರುವ ಬಿಷ್ಣೋಯ್, ತನ್ನನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸದಂತೆ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾನೆ. ಹೈಕೋರ್ಟ್ ಇಂದು ಅರ್ಜಿಯ ವಿಚಾರಣೆ ನಡೆಸಲಿದೆ.
ಮೂಸೆವಾಲಾ ಹತ್ಯೆಯ ಹೊಣೆ ಹೊತ್ತಿರುವ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್, ಬಿಷ್ಣೋಯ್ ಅವರ ಆಪ್ತ ಸಹಾಯಕ. ಲಾರೆನ್ಸ್ ಬಿಷ್ಣೋಯ್ ದೆಹಲಿ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ನಾಯಕ.
ಸಿಧು ಮೂಸ್ ವಾಲಾ ಹತ್ಯೆಯ ಹಿಂದೆ ಗ್ಯಾಂಗ್ ಪೈಪೋಟಿ ಇದೆ ಎಂದು ಪಂಜಾಬ್ ಪೊಲೀಸರು ಶಂಕಿಸಿದ್ದಾರೆ. ಗೋಲ್ಡಿ ಬ್ರಾರ್, ತಿಹಾರ್ ಜೈಲಿನಲ್ಲಿ ಯಾರೊಂದಿಗೆ ಸಂಪರ್ಕದಲ್ಲಿದ್ದ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
ದೆಹಲಿ ಪೊಲೀಸರ ವಿಶೇಷ ಸೆಲ್ ನಿನ್ನೆ ತಿಹಾರ್ ಜೈಲಿನಲ್ಲಿ ಬಿಷ್ಣೋಯ್ ಯನ್ನು ವಿಚಾರಣೆ ನಡೆಸಿದ್ದು, ಅಲ್ಲಿ ಅವರನ್ನು ಹೈ-ಸೆಕ್ಯುರಿಟಿ ವಾರ್ಡ್‌ನಲ್ಲಿ ಇರಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ಸೆಲ್ ತಂಡ ಇದೀಗ ಪಂಜಾಬ್‌ಗೆ ತೆರಳಿದೆ.
ಬಿಷ್ಣೋಯ್, ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಥವಾ MCOCA ಅಡಿಯಲ್ಲಿ ದೆಹಲಿಯ ತಿಹಾರ್ ಜೈಲು ಸೇರಿದ್ದಾನೆ. ಇಂತಹ ಪ್ರಕರಣದಲ್ಲಿ ಜಾಮೀನು ಸುಲಭವಾಗಿ ಸಿಗುವುದಿಲ್ಲ.