ನವದೆಹಲಿ: 'ಅಗ್ನಿಪಥ' ವಿರುದ್ಧದ ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿಗೆ ಆದ ನಷ್ಟದ ಕುರಿತ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಕೋರಿರುವ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ತೀರ್ಮಾನದ ನಂತರ ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ಮಧ್ಯೆ, 'ಅಗ್ನಿಪಥ' ಯೋಜನೆ ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ಆದೇಶವನ್ನು ಹೊರಡಿಸುವ ಮೊದಲು ತನ್ನ ವಾದ ಆಲಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರವು 'ಸುಪ್ರೀಂ'ಗೆ ಕೇವಿಯೆಟ್ ಅನ್ನು ಸಲ್ಲಿಸಿದೆ.
ಈ ನಡುವೆ, ಅಗ್ನಿಪಥ ಯೋಜನೆಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೊಸದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ.
ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ್ ಮತ್ತು ಸುಧಾನ್ಷು ಧುಲಿಯಾ ಅವರಿದ್ದ ವಿಶೇಷ ಪೀಠದ ಎದುರು ಮಂಗಳವಾರ ವಿಷಯ ಪ್ರಸ್ತಾಪಿಸಿದ ವಕೀಲ ವಿಶಾಲ್ ತಿವಾರಿ, 'ಈ ಕುರಿತ ಅರ್ಜಿಗಳನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು' ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ಸಂಬಂಧಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅವರ ಎದುರು ಇಡಲಾಗುವುದು. ಅವರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ' ಎಂದು ಪೀಠವು ಪ್ರತಿಕ್ರಿಯಿಸಿತು.
'ಅಗ್ನಿಪಥ ಯೋಜನೆ ಹಾಗೂ ರಾಷ್ಟ್ರೀಯ ಭದ್ರತೆ ಮತ್ತು ಒಟ್ಟು ಸೇನೆಯ ಮೇಲೆ ಅದರಿಂದಾಗುವ ಪರಿಣಾಮವನ್ನು ಕುರಿತು ಪರಿಶೀಲಿಸಲು ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಪರಿಣತರ ಸಮಿತಿ ರಚಿಸಬೇಕು' ಎಂದು ವಕೀಲರು ಪೀಠಕ್ಕೆ ಮನವಿ ಮಾಡಿದರು.
ಅಗ್ನಿಪಥ ಯೋಜನೆಯನ್ನು ವಿರೋಧಿಸಿ ನಡೆದಿರುವ ಹಿಂಸಾತ್ಮಕ ಪ್ರತಿಭಟನೆ ಕುರಿತಂತೆ ವಸ್ತುಸ್ಥಿತಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರ, ಉತ್ತರ ಪ್ರದೇಶ, ತೆಲಂಗಾಣ, ಬಿಹಾರ, ಹರಿಯಾಣ, ರಾಜಸ್ಥಾನ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಪಿಐಎಲ್ ಸಲ್ಲಿಕೆಯಾಗಿದೆ.
ಮತ್ತೊಂದು ಪಿಐಎಲ್‌ನಲ್ಲಿ ವಕೀಲ ಎಂ.ಎಲ್.ಶರ್ಮಾ ಅವರು, 'ಅಗ್ನಿಪಥ' ಯೋಜನೆಯ ಮೂಲಕ ಶತಮಾನದಷ್ಟು ಹಳೆಯದಾದ ಸೇನಾ ನೇಮಕಾತಿ ಕ್ರಮವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಸಂಸತ್ತಿನ ಅನುಮೋದನೆ ಇಲ್ಲದ ಈ ಕ್ರಮ ಸಂವಿಧಾನಬಾಹಿರ' ಎಂದಿದ್ದಾರೆ.
ಕೇಂದ್ರ ಸರ್ಕಾರವು ಸೇನೆಗೆ ನೇಮಕಾತಿ ಸಂಬಂಧ ಹೊಸದಾಗಿ ಅಗ್ನಿಪಥ ಯೋಜನೆ ಜಾರಿಗೊಳಿಸಿತ್ತು. ಹದಿನೇಳುವರೆ ವರ್ಷದಿಂದ 21 ವರ್ಷದವರೆಗಿನ ಯುವಜನರನ್ನು ನಾಲ್ಕು ವರ್ಷ ಅವಧಿಗೆ ಸೇನೆಗೆ ನೇಮಕಾತಿ ಮಾಡಿಕೊಳ್ಳುವುದು ಯೋಜನೆಯ ಉದ್ದೇಶ. ಇದರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಯುವಜನರು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆಯು ಹಿಂಸೆಗೆ ತಿರುಗಿದೆ.