ನವದೆಹಲಿ: ಇಂದಿನಿಂದ (ಜುಲೈ 1 ಶುಕ್ರವಾರ) ದೇಶಾದ್ಯಂತ ಏಕ-ಬಳಕೆಯ ಪ್ಲಾಸ್ಟಿಕ್ ಮೇಲೆ ನಿಷೇಧ ಹೇರಲಾಗಿದೆ.
ಇಯರ್ ಬಡ್‌ಗಳು, ಬಲೂನ್‌ಗಳು, ಕ್ಯಾಂಡಿ, ಐಸ್‌ಕ್ರೀಮ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು, ಕಟ್ಲರಿ ವಸ್ತುಗಳು - ಪ್ಲೇಟ್‌ಗಳು, ಕಪ್‌ಗಳು, ಗ್ಲಾಸ್‌ಗಳು, ಫೋರ್ಕ್ಸ್, ಸ್ಪೂನ್‌ಗಳು, ಚಾಕುಗಳು, ಟ್ರೇಗಳು, ಸ್ಟಿರರ್‌ಗಳು, ಸ್ವೀಟ್ ಬಾಕ್ಸ್, ಇನ್ವಿಟೇಶನ್ ಕಾರ್ಡ್, ಸಿಗರೇಟ್ ಪ್ಯಾಕೆಟ್ ಗಳಿಗೆ ಬಳಸುವ ಪ್ಯಾಕೇಜಿಂಗ್ ವಸ್ತುಗಳು, 100 ಮೈಕ್ರಾನ್‌ಗಿಂತ ಕಡಿಮೆ ಇರುವ ಪಿವಿಸಿ ಬ್ಯಾನರ್‌ಗಳು, ಆಲಂಕಾರಕ್ಕಾಗಿ ಪಾಲಿಸ್ಟೈರೀನ್, ಕ್ಯಾರಿ ಬ್ಯಾಗ್‌ಗಳು, ಆಲಂಕಾರಿಕ ಥರ್ಮಾಕೋಲ್ ಗಳು, ಪ್ಲಾಸ್ಟಿಕ್ ಧ್ವಜಗಳನ್ನು ನಿಷೇಧಿಸಲಾಗಿದೆ.
ದೇಶದಲ್ಲಿ ಹಲವು ವರ್ಷಗಳಿಂದ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಬಳಕೆಗೆ ನಿಷೇಧವಿದೆ. 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳ ಪ್ರಕಾರ ಕಳೆದ ವರ್ಷದ ಸೆ.30ರಂದು 75 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು ನಿಷಿದ್ಧವಾಗಿವೆ. ಈ ವರ್ಷದ ಡಿ.31ರೊಳಗೆ 120 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಕ್ಯಾರಿಬ್ಯಾಗ್ ಹಾಗೂ ಇನ್ನಿತರ ರೀತಿಯ ಪ್ಲಾಸ್ಟಿಕ್ ವಸ್ತುಗಳು ನಿಷೇಧವಾಗಲಿವೆ.
ಶಿಕ್ಷೆ ಏನು?
ಈಗ ಚಾಲ್ತಿಯಲ್ಲಿ ಇರುವಂತೆ ಚಿಲ್ಲರೆ ಮಾರಾಟಗಾರರಿಂದ ಮೊದಲ ಬಾರಿ 2,000 ರೂ., ಎರಡನೇ ಬಾರಿಗೆ 5,000 ರೂ. ಮತ್ತು ಮೂರನೇ ಬಾರಿ ಉಲ್ಲಂಘನೆಗೆ 10,000 ರೂ.ಗಳ ದಂಡವನ್ನು ವಿಧಿಸಲಾಗುತ್ತಿದೆ. ಜು.1ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ನಿಯಮ ಉಲ್ಲಂಘಿಸಿದರೆ 1986ರ ಪರಿಸರ ಸಂರಕ್ಷಣೆ ಕಾಯ್ದೆಯಡಿ ಐದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ. ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮುನ್ಸಿಪಾಲಿಟಿಗಳು ಹೊಂದಿರುವ ಬೇರೆ ಬೇರೆ ನಿಯಮಗಳಡಿ ಮತ್ತು ಇನ್ನಿತರ ಕೆಲ ದಂಡಸಂಹಿತೆಗಳ ಅಡಿಯಲ್ಲೂ ಶಿಕ್ಷೆ ವಿಧಿಸಲು ಸಾಧ್ಯವಿದೆ.
ದೂರು ನೀಡಲು ಆಯಪ್
ಪ್ಲಾಸ್ಟಿಕ್ ನಿಷೇಧದ ನಿಯಮಗಳನ್ನು ಉಲ್ಲಂಘಿಸುವುದು ಕಂಡರೆ ಜನರೇ ದೂರು ನೀಡಲು ಅನುಕೂಲ ಮಾಡಿಕೊಡುವುದಕ್ಕೆ ಆಯಪ್ ಬಿಡುಗಡೆ ಮಾಡಲಾಗುತ್ತಿದೆ. ಫೋಟೋ ತೆಗೆದು ಈ ಆಯಪ್‌ನಲ್ಲಿ ಅಪ್‌ಡೇಟ್ ಮಾಡಿದರೆ ವಿಶೇಷ ತಂಡಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿವೆ.