ತಿರುವನಂತಪುರಂ: ಹಳದಿ-ಕೆಂಪು ಮೈಬಣ್ಣದ ಮೇಲೆ ಕೆಂಪು ಟಿಂಟ್ ಹೊಂದಿರುವ ಈ ಮಾವು ತನ್ನ ಚೆಲುವಿನಿಂದಲೇ ಎಲ್ಲರ ಗಮನ ಸೆಳೆಯುತ್ತದೆ.
ಹಣ್ಣುಗಳ ರಾಜನ ಪೈಕಿ ಸ್ಟಾರ್ ಎನಿಸಿಕೊಂಡಿರುವ ಈ ವಿಶಿಷ್ಟ ಮಾವು ಪ್ರಕೃತಿ ಪ್ರಿಯರನ್ನು ಆಕರ್ಷಿಸಿದೆ. ತಿರುವನಂತಪುರದ ಪಾಲಯಂನಲ್ಲಿರುವ ಕೇರಳ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಕಂಗೊಳಿಸುವ ಬೃಹತ್ ಗಾತ್ರದ ಈ ಮಾವಿನಮರ 'ಕೆಯು ಮಂಬಝಾಮ್' ಎಂಬ ಹೆಸರಿನ ವಿಶಿಷ್ಟ ಮಾವಿನ ವೈಭವಕ್ಕೆ ಸಾಕ್ಷಿಯಾಗಿ ನಿಂತಿದೆ.
70 ಅಡಿ ಎತ್ತರದ ಈ 'ನಟ್ಟು ಮಾವು' ಮರ ಮನೋಜ್ ಎಂ.ಆರ್. ಎಂಬ ಸಂಶೋಧನಾ ವಿದ್ಯಾರ್ಥಿ ಕೊರಿಯವಟ್ಟಂ ಜೀವವೈವಿಧ್ಯ ಸಂರಕ್ಷಣಾ ಕೇಂದ್ರದ ನಿರ್ದೇಶಕ ಎ.ಗಂಗಾಪ್ರಸಾದ್ ಮಾರ್ಗದರ್ಶನದಲ್ಲಿ ನಡೆಸುತ್ತಿರುವ ಸಂಶೋಧನಾ ಸಮೀಕ್ಷೆಯ ಭಾಗವಾಗಿದೆ.
ಈ ತಂಡ ರಾಜ್ಯದಲ್ಲಿರುವ 40 ವಿಶಿಷ್ಟ ಹಾಗೂ ಅಪರೂಪದ ಮಾವು ತಳಿಗಳನ್ನು ದಾಖಲಿಸಿದೆ. ಇಂಥ ಅಪರೂಪದ ತಳಿಗಳಲ್ಲಿ ಕೇರಳ ವಿವಿ ಕ್ಯಾಂಪಸ್‍ನಲ್ಲಿರುವ ಈ ಮಾವು ಕೂಡಾ ಒಂದು. ಇಂಥ ಜಾತಿಯ ಮಾವು ಕೇರಳದ ಬೇರೆ ಯಾವ ಪ್ರದೇಶದಲ್ಲೂ ಕಂಡುಬರುವುದಿಲ್ಲ ಎಂದು ಗಂಗಾಪ್ರಸಾದ್ ಹೇಳುತ್ತಾರೆ.
ಈ ಮರ ಸುಮಾರು 350 ವರ್ಷ ಹಳೆಯದ್ದಾಗಿದ್ದು, ಇದರ ಬುಡ 4.2 ಮೀಟರ್ ಸುತ್ತಳತೆ ಹೊಂದಿದೆ. ಈ ಮಾವಿನ ನಾರಿನ ಆಂಶವನ್ನು ಸಿಬಿಸಿ ವಿಶ್ಲೇಷಿಸುತ್ತಿದೆ. ಇದು ಸಾರ್ವಜನಿಕರ ಗಮನ ಸೆಳೆದಿದ್ದು, ಇದನ್ನು ಸಂರಕ್ಷಿಸುವ ಯೋಜನೆ ನಮ್ಮದು ಎಂದು ಅವರು ವಿವರಿಸಿದ್ದಾರೆ.
ಇವರ ನೇತೃತ್ವದ ತಂಡ ಈಗಾಗಲೇ ಈ ಮರದಿಂದ ಸುಮಾರು 50 ಕಸಿ ಗಿಡಗಳನ್ನು ಬೆಳೆಸಿದೆ. ಮೂರು ತಿಂಗಳ ಬಳಿಕ ಇದನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತದೆ ಎಂದು ಅವರು ಹೇಳಿದ್ದು, newindianexpress.com ವರದಿ ಮಾಡಿದೆ.