ನವದೆಹಲಿ : ಟೆಟ್ರಾ ಪ್ಯಾಕ್ಗಳೊಂದಿಗೆ ಬಳಸುವ ಪುಟ್ಟ ಪ್ಲಾಸ್ಟಿಕ್ ಸ್ಟ್ರಾಗಳನ್ನು ನಿಷೇಧಿಸುವುದನ್ನು ವಿಳಂಬಿಸುವಂತೆ ಆಗ್ರಹಿಸಿ ಭಾರತದ ಅತಿ ದೊಡ್ಡ ಡೈರಿ ಸಮೂಹ ಅಮುಲ್ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ.
ಕೇಂದ್ರ ಸರಕಾರದ ಪ್ಲಾಸ್ಟಿಕ್ ಸ್ಟ್ರಾ ನಿಷೇಧದ ನಡೆ ಜಗತ್ತಿನ ಅತಿ ದೊಡ್ಡ ಹಾಲು ಉತ್ಪಾದಕ ದೇಶವಾದ ಭಾರತದಲ್ಲಿ ಹಾಲಿನ ಬಳಕೆ ಹಾಗೂ ರೈತರ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡಲಿದೆ ಎಂದು ಅದು ಹೇಳಿದೆ.
ಕೈಗಾರಿಕೆ ಸಂಸ್ಥೆ 79 ಕೋಟಿ ಡಾಲರ್ ಮಾರುಕಟ್ಟೆ ಎಂದು ಅಂದಾಜಿಸಿರುವ ಟೆಟ್ರಾ ಪ್ಯಾಕ್ ಜ್ಯೂಸ್ಗಳು ಹಾಗೂ ಡೈರಿ ಉತ್ಪನ್ನಗಳೊಂದಿಗೆ ನೀಡುವ ಸ್ಟ್ರಾವನ್ನು ಜುಲೈ 1ರಂದು ನಿಷೇಧಿಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ರವಾನಿಸಿದ ಮೇ 28ರ ದಿನಾಂಕದ ಪತ್ರದಲ್ಲಿ ಅಮುಲ್ ಈ ಮನವಿ ಮಾಡಿದೆ. ಅಮುಲ್ ಪ್ರತಿವರ್ಷ ಪ್ಲಾಸ್ಟಿಕ್ ಸ್ಟ್ರಾ ಹೊಂದಿದ ಡೈರಿ ಉತ್ಪನ್ನದ 10 ಲಕ್ಷ ಟೆಟ್ರಾ ಪ್ಯಾಕ್ಗಳನ್ನು ಮಾರಾಟ ಮಾಡುತ್ತದೆ. ಕೇಂದ್ರ ಸರಕಾರ ತನ್ನ ನಿಲುವನ್ನು ಬದಲಾಯಿಸಲು ನಿರಾಕರಿಸಿದ ಹಾಗೂ ಪರ್ಯಾಯ ಸ್ಟ್ರಾಗಳಿಗೆ ಬದಲಾಗುವಂತೆ ಕಂಪೆನಿಗಳಲ್ಲಿ ವಿನಂತಿಸಿದ ಬಳಿಕ ಮುಖ್ಯವಾಗಿ ಕೋಕೋ-ಕೋಲಾ ಹಾಗೂ ಪೆಪ್ಸಿಕೋ ಸೇರಿದಂತೆ ಜಾಗತಿಕ ಪ್ರಮಖ ತುಂಪು ಪಾನಿಯಗಳ ಕಂಪೆನಿಗಳು ಹಾಗೂ ಅಮುಲ್ ಬೆಚ್ಚಿ ಬಿದ್ದಿದೆ. ಮಾಲಿನ್ಯ ಉಂಟು ಮಾಡುವ ಹಾಗೂ ಏಕ ಬಳಕೆಯ ಪ್ಲಾಸ್ಟಿಕ್ಗೆ ಅಂತ್ಯ ಹಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಯಾನದ ಭಾಗವಾಗಿ ಈ ನಿಷೇಧಕ್ಕೆ ಕರೆ ನೀಡಲಾಗಿದೆ.
ಆದರೆ, ಸ್ಟ್ರಾ ಹಾಲು ಬಳಕೆಯನ್ನು ಉತ್ತೇಜಿಸಲು ನೆರವಾಗುತ್ತದೆ. ಆದುದರಿಂದ ಈ ನಿಷೇಧವನ್ನು ಒಂದು ವರ್ಷ ಮುಂದೂಡಬೇಕು ಎಂದು 800 ಕೋ. ಡಾಲರ್ ವಹಿವಾಟು ಹೊಂದಿರುವ ಅಮೂಲ್ ಸಮೂಹದ ಆಡಳಿತ ನಿರ್ದೇಶಕ ಆರ್.ಎಸ್ ಸೋಧಿ ಸಹಿ ಮಾಡಿದ ಪತ್ರದಲ್ಲಿ ಹೇಳಲಾಗಿದೆ. ವಿಳಂಬವು ಹಾಲು ಹಾಗೂ ಹಾಲಿನ ಉತ್ಪನ್ನಗಳ ರೂಪದಲ್ಲಿ ನಮ್ಮ ಆಹಾರ ಸುರಕ್ಷತೆಗೆ ಭದ್ರತೆ ನೀಡುವ 10 ಕೋಟಿ ಹೈನುಗಾರಿಕೆ ನಡೆಸುವ ರೈತರಿಗೆ ದೊಡ್ಡ ಪರಿಹಾರ ಹಾಗೂ ಲಾಭ ನೀಡಲಿದೆ ಎಂದು ಸೋಧಿ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ, ಈ ಬಗ್ಗೆ ಮೋದಿ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸ್ಟ್ರಾ ಕಡಿಮೆ ಉಪಯುಕ್ತತೆಯ ಉತ್ಪನ್ನ. ಇದರ ಬದಲಿಗೆ ಪೇಪರ್ ಸ್ಟ್ರಾಗಳನ್ನು ಬಳಸಬಹುದು ಅಥವಾ ಟೆಟ್ರಾ ಪ್ಯಾಕ್ಗಳನ್ನು ಮರು ವಿನ್ಯಾಸಗೊಳಿಸಬಹುದು ಎಂಬುದು ಸರಕಾರದ ಭಾವನೆ ಎಂದು ಮೂಲಗಳು ತಿಳಿಸಿವೆ. ಈ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಲು ಸೋಧಿ ಅವರು ನಿರಾಕರಿಸಿದ್ದಾರೆ. ಆದರೆ, ಜುಲೈ 1ರಿಂದ ಸ್ಟ್ರಾ ಮೇಲೆ ನಿಷೇಧ ಹೇರಿದರೆ ಸ್ಟ್ರಾ ಇಲ್ಲದೆ ಪ್ಯಾಕ್ಗಳನ್ನು ಮಾರಾಟ ಮಾಡಬೇಕಾಗಬಹುದು ಎಂದು ಸೋಧಿ ತಿಳಿಸಿದ್ದಾರೆ.