ಬದಿಯಡ್ಕ: ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಬದ್ಧವಾಗಿ ಲಭಿಸಬೇಕಾದ ಎಲ್ಲಾ ಸರ್ಕಾರಿ ಹಕ್ಕು ಮತ್ತು ಸವಲತ್ತು ಪಡೆದುಕೊಳ್ಳಲು ನಿರಂತರ ಹೋರಾಟ ಅನಿವಾರ್ಯ ವಾಗಿದೆ ಎಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಹೇಳಿದರು.
ಕಾಸರಗೋಡು ಕನ್ನಡ ಹೋರಾಟ ಸಮಿತಿಯ ಆಶ್ರಯದಲ್ಲಿ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ಭಾನುವಾರ ನಡೆದ ವಿಶೇಷ ಸಭೆಯಲ್ಲಿ ಶ್ರೀಗಳು ಮಾರ್ಗದರ್ಶನ ನೀಡಿ ಮಾತನಾಡಿದರು.
ನಿರಂತರವಾಗಿ ಭಾಷಾ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲು ಹೋರಾಟದ ಸ್ವರೂಪ ಬದಲಾಗಬೇಕಾಗಿದೆ. ಕನ್ನಡಿಗರಿಗೆ ಇಲ್ಲಿ ಆಗುತ್ತಿರುವ ಅನ್ಯಾಯದ ಬಗೆಗೆ ಜನರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ಕೆಲಸವಾಗಬೇಕು. ಸರ್ಕಾರ ನೀಡಿರುವ ಸವಲತ್ತುಗಳನ್ನು ಕಸಿದುಕೊಳ್ಳುತ್ತಿರುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಮನೆಮನೆಗಳಲ್ಲಿ ಜಾಗೃತಿ ಮೂಡಬೇಕಿದೆ ಎಂದರು.
ಸಭೆಯಲ್ಲಿ ಕನ್ನಡ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದರು. ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ನ್ಯಾಯವಾದಿ ಸದಾನಂದ ರೈ, ಗಮಕ ಕಲಾಪರಿಷತ್ತಿನ ಟಿ.ಶಂಕರನಾರಾಯಣ ಭಟ್, ಕಮಲಾಕ್ಷ ಕಲ್ಲುಗದ್ದೆ, ಡಾ.ವಾಣಿಶ್ರೀ, ಸೂರ್ಯ ಭಟ್ ಎಡನೀರು, ಜಯ ಕುಮಾರ್, ಡಾ.ರತ್ನಾಕರ ಮಲ್ಲಮೂಲೆ, ಎಂ.ಎಚ್.ಜನಾರ್ದನ, ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ಮೊದಲಾದವರು ಮಾತನಾಡಿದರು. ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲ್, ಜಯದೇವ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ಹೋರಾಟ ಸಮಿತಿ ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಎಂ.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ನಿರ್ಣಯಗಳು : ಕರ್ನಾಟಕದ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ನೀಡಲಾದ ಮೀಸಲಾತಿ ಸೀಟುಗಳಿಗೆ ಕನ್ನಡ ತಿಳಿಯದ ಮಲಯಾಳಿ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿರುವುದನ್ನು ತಡೆಗಟ್ಟಲು ವೃತ್ತಿ ಶಿಕ್ಷಣ ನಿರ್ದೇಶಕರನ್ನು ಭೇಟಿಯಾಗಿ ಕನ್ನಡಿಗರ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯ ಬಗ್ಗೆ ಗಮನ ಹರಿಸಲು ನಿಯೋಗ ತೆರಳಲು ತೀರ್ಮಾನಿಸಿತು.
ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳ ಕಲಿಸಲು ಅಧ್ಯಾಪಕರನ್ನು ನೇಮಿಸುವ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಂ.ವಿ ಮಹಾಲಿಂಗೇಶ್ವರ ಭಟ್ ಅವರು ಹೋರಾಟದ ಮುಂದಿನ ಹಾದಿಯ ಬಗ್ದಗೆ ವಿಶದೀಕರಿಸಿ ಎಚ್.ಎಸ್ ಎ ಇಂಗೀಷ್, ಸಂಸ್ಕøತ ಹಿಂದಿ ಶಿಕ್ಷಕ ನೇಮಕಾತಿ ಕುರಿತು ಈವರೆಗಿನ ಪ್ರಗತಿ ವಿವರಿಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ಕನ್ನಡ ಎಲ್ ಡಿ ಕ್ಲರ್ಕ್ ನೇಮಕಾತಿ ಒಳಸುಳಿಗಳ ಬಗ್ಗೆ ಬೆಳಕು ನೀಡಿದರು. ದೈಹಿಕ ಶಿಕ್ಷಕ ನೇಮಕಾತಿಯ ವಂಚನೆಯ ಬಗ್ಗೆ ಗಮನ ಹರಿಸಲು ಸೂಚಿಸಲಾಯಿತು. ಬದಿಯಡ್ಕದಲ್ಲಿ ಖಜಾನೆ(ಟ್ರೆಶರಿ) ಸ್ಥಾಪೊಇಸುವುದರಿಂದ ಕನ್ನಡಿಗರಿಗಾಗುವ ಅನುಕೂಲತೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಜೊತೆಗೆ ಕನ್ನಡ ಮುದ್ರಣಾಲಯ ನಿರ್ಮಾಣ ಬೇಡಿಕೆಯನ್ನು ಬಲಪಡಿಸುವುದರಿಂದ ಮಲೆಯಾಳೀಕರಣದಿಂದ ಪಾರಾಗುವ ಸಾಧ್ಯತೆ ಬಗ್ಗೆ ತಿಳಿಸಲಾಯಿತು. ಕನ್ನಡ ಗ್ರಂಥಾಲಯ ಸ್ಥಾಪನೆಗೆ ಒತ್ತು ನೀಡಲು ತೀರ್ಮಾನಿಸಲಾಯಿತು. ಅಂಚೆ, ಬ್ಯಾಂಕ್ ರೈಲ್ವೇ ಇಲಾಖೆಗಳ ಪರೀಕ್ಷೆಗಳಲ್ಲಿ ಕನ್ನಡದಲ್ಲೇ ಗಡಿನಾಡಿಗರಿಗೆ ಬರೆಯಲು ಅವಕಾಶ ಕಲ್ಪಿಸಲು ಬೇಕಾದ ಕ್ರಮಗಳಿಗೆ ಮುಂದಾಗಲು ತೀರ್ಮಾನಿಸಲಾಯಿತು. ನೋಂದಣಿ ಇಲಾಖೆ, ಕಂದಾಯ ಇಲಾಖೆ ದಾಖಲೆಗಳನ್ನು ಕನ್ನಡದಲ್ಲಿ ಪುನಃಸ್ಥಾಪಿಸಲು ಒತ್ತಡ ಹೇರಲು ನಿರ್ಣಯಿಸಲಾಯಿತು.