ತಿರುವನಂತಪುರ: ಅಗ್ನಿಪಥ ಯೋಜನೆ ವಿರುದ್ಧದ ಆಂದೋಲನದ ಅಂಗವಾಗಿ ಸೋಮವಾರ ಕೆಲವು ಸಂಘಟನೆಗಳು ಭಾರತ್ ಬಂದ್ ಘೋಷಿಸಿರುವ ಹಿನ್ನೆಲೆಯಲ್ಲಿ ಪೋಲೀಸರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ರಾಜ್ಯ ಪೋಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಸಾರ್ವಜನಿಕರ ಮೇಲಿನ ದೌರ್ಜನ್ಯ ಮತ್ತು ಸಾರ್ವಜನಿಕ ಆಸ್ತಿ ನಾಶದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲೀಸರು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಮೇಲಿನ ದೌರ್ಜನ್ಯ ಮತ್ತು ಸಾರ್ವಜನಿಕ ಆಸ್ತಿ ನಾಶದ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಹಿಂಸಾತ್ಮಕ ಪ್ರತಿಭಟನೆ ಮತ್ತು ಬಲವಂತವಾಗಿ ವ್ಯಾಪಾರ ಮಳಿಗೆಗಳನ್ನು ಮುಚ್ಚಿಸುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು. ರಾಜ್ಯದ ಸಂಪೂರ್ಣ ಪೋಲೀಸ್ ಸಿಬ್ಬಂದಿಗಳಿಗೆ ನಾಳೆ ಪೂರ್ಣಾವಧಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿದೆ.
ನ್ಯಾಯಾಲಯಗಳು, ವಿದ್ಯುತ್ ಮಂಡಳಿ ಕಚೇರಿಗಳು, ಕೆಎಸ್‍ಆರ್‍ಟಿಸಿ ಮತ್ತು ಇತರ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೆ ಅಗತ್ಯ ಪೋಲೀಸ್ ರಕ್ಷಣೆ ನೀಡಲು ಜಿಲ್ಲಾ ಪೋಲೀಸ್ ವರಿಷ್ಠರು ಕ್ರಮಕೈಗೊಳ್ಳಲಿದ್ದಾರೆ. ಸಂಚಾರ ನಡೆಸುವ ಖಾಸಗಿ ಬಸ್‍ಗಳಿಗೆ ಪೋಲೀಸರು ಭದ್ರತೆ ಒದಗಿಸಲಿದ್ದಾರೆ. ಭಾನುವಾರ ರಾತ್ರಿಯಿಂದ ಪ್ರಮುಖ ಸ್ಥಳಗಳಲ್ಲಿ ಪೋಲೀಸರು ಪಿಕೆಟಿಂಗ್ ಮತ್ತು ಗಸ್ತು ತಿರುಗಲಿದ್ದಾರೆ.
ಜಿಲ್ಲಾ ಪೋಲೀಸ್ ಮುಖ್ಯಸ್ಥರ ನೇತೃತ್ವದಲ್ಲಿ ರೇಂಜ್ ಡಿಐಜಿಗಳು ಮತ್ತು ಪ್ರಾದೇಶಿಕ ಐಜಿಗಳು ಭದ್ರತಾ ವ್ಯವಸ್ಥೆಗಳನ್ನು ಸಂಯೋಜಿಸುತ್ತಾರೆ. ಹಿಂಸಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾನೂನು ಸುವ್ಯವಸ್ಥೆ ಇಲಾಖೆ ಎಡಿಜಿಪಿಗೆ ಸೂಚಿಸಿದೆ.