ಕಾಸರಗೋಡು: ಸಮಗ್ರ ಶಿಕ್ಷಣ ಕೇರಳದ ಅಂಗವಾಗಿ 2016ರಿಂದ ಸರ್ಕಾರಿ ಶಾಲೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳದ ವಿಶೇಷ ಶಿಕ್ಷಕ ಸಮುದಾಯವು ಸೇವಾ ವೇತನ ವ್ಯವಸ್ಥೆಯ ಅಸಮಾನತೆ ಹಾಗೂ ಶೋಷಣೆ ವಿರುದ್ಧ ರಾಜ್ಯ ಮಟ್ಟದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಆರಂಭಿಸಿತು.
2016-17ನೇ ಸಾಲಿನಲ್ಲಿ ಕೆಲಸ ಆರಂಭಿಸಿದಂದಿನಿಂದ ಪ್ರಯಾಣ ಭತ್ಯೆ ಸೇರಿದಂತೆ 26,200 ರೂ.ವೇತನ ನಿಗದಿಪಡಿಸಿದ್ದರೂ. 2019ರಿಂದ ಈ ವೇತನ 14ಸಾವಿರಕ್ಕೆ ಇಳಿಕೆಯಾಗಿದೆ. ಅರೆಕಾಲಿಕ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಸಿ, ಪೂರ್ಣಾವಧಿ ಕೆಲಸ ನಡೆಸುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ವಿಶೇಷ ಶಿಕ್ಷಕರ ಸಂಘ (ಎಸ್‍ಟಿಎ) ವತಿಯಿಂದ ಪ್ರತಿಭಟನೆ ಆಯೋಜಿಸಲಾಗುತ್ತಿದೆ.
ಶಿಕ್ಷಕರು ಎಸ್‍ಎಸ್‍ಕೆ ಕಾಸರಗೋಡು ಜಿಲ್ಲಾ ಕೇಂದ್ರದಲ್ಲಿ ವಿವಿಧ ಕಲೆಗಳನ್ನು ರಚಿಸುವ ಹಾಗೂ ಪ್ರದರ್ಶಿಸುವ ಮೂಲಕ ವಿಶಿಷ್ಟ ಪ್ರಾತ್ಯಕ್ಷಿಕೆಯೊಂದಿಗೆ ಪ್ರತಿಭಟನೆ ನಡೆಸಲಾಯಿತು. ಕ್ಯಾರಮ್ಸ್ ಅಸೋಸಿಯೇಶನ್ ಜಿಲ್ಲಾ ಕೋಶಾಧಿಕಾರಿ, ಸಾಂಸ್ಕøತಿಕ ಕಾರ್ಯಕರ್ತ ಗಣೇಶ್ ಅರಮಂಗಾನಂ ಸಮಾರಂಭ ಉದ್ಘಾಟಿಸಿದರು. ಎಸ್‍ಟಿಎ ಜಿಲ್ಲಾಧ್ಯಕ್ಷ ಪ್ರಭಾಕರನ್ ಅಧ್ಯಕ್ಷತೆ ವಹಿಸಿದ್ದರು. ಎಸ್‍ಟಿಎ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ವೇಣು ವಂದಿಸಿದರು.