ಬೈಕ್ ರೈಡ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಎಲ್ಲರಿಗೂ ಇಷ್ಟನೇ. ಆದರೆ ಹೆಲ್ಮೆಟ್ ಧರಿಸಿ ಟು ವೀಲರ್ ರೈಡ್ ಹೋಗುವುದು ಎಂದರೆ ಅನೇಕರಿಗೆ ಕೊಂಚ ಇರಿಸು ಮುರಿಸು. ಅನೇಕರು ಹೆಲ್ಮೆಟ್ ಧರಿಸದೆ ಟು ವೀಲರ್ ನಲ್ಲಿ ಪ್ರಯಾಣ ಬೆಳೆಸಲು ಇಷ್ಟಪಡುತ್ತಾರೆ. ಅದಕ್ಕೆ ಕಾರಣ ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತೆ ಎನ್ನುವ ಭಯ. ಹೌದು, ಟು ವೀಲರ್ ರೈಡ್ ಮಾತ್ರವಲ್ಲ ಕ್ರಿಕೆಟರ್ ಗಳು, ಕಾರು ರೇಸ್ ಮಾಡುವವರು, ಬೈಕ್ ರೇಸ್ ಮಾಡುವವರು, ಕೆಲವೊಂದು ಕ್ರೀಡೆಗೆ ಹೆಲ್ಮೆಟ್ ಬಳಸಲಾಗುತ್ತದೆ. ಎಲ್ಲರಿಗೂ ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತೆ ಎನ್ನುವ ಆತಂಕ ಇದ್ದೆ ಇದೆ. ಹಾಗಾದರೆ ಈ ಹೆಲ್ಮೆಟ್ ಧರಿಸಿದರೆ ಕೂದಲು ಊದುರುತ್ತಾ?ಹೆಲ್ಮೆಟ್ ನಿಂದ ಕೂದಲು ಉದುರಲು ಕಾರಣವೇನು? ಹೆಲ್ಮೆಟ್ ನಿಂದ ಕೂದಲು ಉದುರುವುದಾದರೆ ಏನು ಮಾಡಬೇಕು? ಇಲ್ಲಿದೆ ಈ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ.
ವೈದ್ಯರು ಈ ಬಗ್ಗೆ ಹೇಳುವುದೇನು?
ಹೆಲ್ಮೆಟ್ ಧರಿಸುವುದರಿಂದ ಕೂದಲು ಉದುರುವುದಿಲ್ಲ ಎಂದು ತಜ್ಞ ವೈದ್ಯರೊಬ್ಬರು ತಿಳಿಸಿದ್ದಾರೆ. ಕೂದಲು ಉದುರುವಿಕೆಗೆ ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ದತಿ ಕಾರಣ ಎಂದು ತಿಳಿಸಿರುವ ವೈದ್ಯರು, ಕೂದಲು ಉದುರಲು ಮಾನವನ ಶರೀರದಲ್ಲಿನ ಸಮಸ್ಯೆಯೇ ಮುಖ್ಯ ಕಾರಣ ಎಂದಿದ್ದಾರೆ. ಆದರೆ ಜನರು ಹೆಲ್ಮೆಟ್ ಧರಿಸಿಯೇ ಕೂದಲು ಉದುರುತ್ತಿದೆ ಎಂದು ಕೆಲವರು ನಂಬಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆಯೇ? ಕೂದಲು ಹಾಗೂ ಹೆಲ್ಮೆಟ್ ಬಗ್ಗೆ ನಮ್ಮಲ್ಲಿ ಅನೇಕರಿಗೆ ಅನೇಕ ಗೊಂದಲ ಇ.ದೆ ಈ ಬಗ್ಗೆ ನಾವು ನಿಮಗೆ ಕ್ಲಾರಿಫೀಕೇಶನ್ ಕೊಡುತ್ತಾ ಹೋಗುತ್ತೇವೆ. ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಸಾಮಾನ್ಯವಾಗಿದೆ, ಆದರೆ ಹೆಲ್ಮೆಟ್ ನಿಂದ ಕೂದಲು ಉದುರುತ್ತಿದೆ ಎನ್ನುವುದು ಸತ್ಯಕ್ಕೆ ದೂರವಾದುದು. ಏಕೆಂದರೆ ಕಾರಿನಲ್ಲಿ ಪ್ರಯಾಣ ಮಾಡುವವನ ತಲೆ ಕೂಡ ಸಂಪೂರ್ಣವಾಗಿ ಬೊಕ್ಕ ತಲೆಯಾಗಿರುತ್ತದೆ. ಹೀಗಾಗಿ ಹೆಲ್ಮೆಟ್ ನಿಂದ ಕೂದಲು ಉದುರಿದೆ ಎಂದು ಹೇಳಲು ಆಗುವುದಿಲ್ಲ. ಎಲ್ಲದರೂ ಕೂದಲು ಉದುರುವ ಸಮಸ್ಯೆ ಇದ್ದ ವ್ಯಕ್ತಿ ಹೆಲ್ಮೆಟ್ ಧರಿಸಿದರೆ ಖಂಡಿತ ಅವನ ಕೂದಲು ಉದುರುತ್ತದೆ. ಆ ವ್ಯಕ್ತಿಯ ವಿಚಾರದಲ್ಲಿ ಹೆಲ್ಮೆಟ್ ವೊಂದು ಕಾರಣವಾಗಿರಬಹುದು ಅಷ್ಟೇ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ. ಅಲ್ಲದೇ ಹೆಲ್ಮೇಟ್ ನಿಂದಲೇ ಕೂದಲು ಉದುರುವುದು ಎಂಬುವುದು ಸಂಪೂರ್ಣ ತಪ್ಪು ಮಾಹಿತಿ, ಆ ವ್ಯಕ್ತಿಗೆ ಮೂಲತಃ ಕೂದಲು ಉದುರುವ ಸಮಸ್ಯೆ ಇದ್ದರೆ ಮಾತ್ರ ಆತ ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ ಎಂದು ವರದಿಯೊಂದು ತಿಳಿಸಿದೆ. ಆದರೆ ಪುರುಷರಿಗೆ ಕೂದಲು ಉದುರಲು ಮುಖ್ಯ ಕಾರಣ, ಹಾರ್ಮೋನ್ ಗಳ ಅಸಮತೋಲ. ಹೌದು,ಕೂದಲು ಉದುರುವಿಕೆಗೆ ಪ್ರಮುಖ ಕಾರಣವೆಂದರೆ ಈಸ್ಟ್ರೊಜೆನಿಕ್ ಅಲೋಪೆಸಿಯಾ (Male Pattern Baldness), ಇದು ಪುರುಷರಲ್ಲಿ ಕಂಡುಬರುವ DTH ಹಾರ್ಮೋನ್ (Dihydrotestosterone)ನ ಅಸಮತೋಲನದಿಂದ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಪುರುಷರ ತಲೆಯ ಒಂದು ಭಾಗದಿಂದ ಕೂದಲು ವೇಗವಾಗಿ ಉದುರಲು ಪ್ರಾರಂಭಿಸುತ್ತದೆ. ಶೇ.30ರಷ್ಟು ಪುರುಷರಲ್ಲಿ ಈ ಸಮಸ್ಯೆಯು 30ನೇ ವಯಸ್ಸಿನಲ್ಲಿ ಪ್ರಾರಂಭವಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು ಮಹಿಳೆಯರಿಗೂ ಹಾರ್ಮೋನ್ ಗಳ ಅಸಮತೋಲನದಿಂದ ಕೂದಲು ಉದುರುತ್ತದೆ. ಮಹಿಳೆ ಹಾಗೂ ಪುರುಷರಿಗೆ ಕೂದಲು ಊದುರಲು ಹಾರ್ಮೋನ್ ಗಳ ಅಸಮತೋಲನ ಮುಖ್ಯ ಕಾರಣ.
ಹೆಲ್ಮೆಟ್ ಧರಿಸಿ ಕೂದಲು ಉದುರಿದೆ ಎಂದು ಯಾಕೆ ನಂಬುತ್ತಾರೆ? ಅನೇಕರು ಈ ರೀತಿ ಕಾರಣ ಹೇಳಿಕೊಂಡು ವೈದ್ಯರುಗಳನ್ನು ಭೇಟಿ ಮಾಡುತ್ತಾರೆ. ಅವರಿಗೆ ಈ ಬಗ್ಗೆ ಮಾಹಿತಿ ಇಲ್ಲದಿರುವುದುದೇ ಇಂತಹ ಗೊಂದಲಕ್ಕೆ ಕಾರಣ. ವಾಸ್ತವತೆ ಬಗ್ಗೆ ಅರಿವು ಮೂಡಿಸಿದಾಗ ಅವರು ನಂಬುತ್ತಾರೆ. ನಿಜಕ್ಕೂ ನಿಮ್ಮ ಹೆಲ್ಮೆಟ್ ನಿಂದ ಕೂದಲು ಉದುರುವುದಿಲ್ಲ. ಆದರೆ ಕೆಲವೊಂದು ವಿಚಾರಗಳ ಬಗ್ಗೆ ತಿಳಿದರೆ ಇದರ ಸತ್ಯಾಂಶ ಗೊತ್ತಾಗುತ್ತದೆ. ಹೆಲ್ಮೆಟ್ ಧರಿಸಿ ಕೂದಲು ಉದುರುತ್ತದೆ ಎನ್ನುವುದು ಯಾವುದೇ ವೈದ್ಯ ಲೋಕದಲ್ಲಿ ಈವರೆಗೆ ಪ್ರೂವ್ ಆಗಿಲ್ಲ.
ನಿರಂತರವಾಗಿ ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತಾ? ಇಲ್ಲ ಎನ್ನುವುದು ಪರಿಣಿತರ ವಾದ. ಹೌದು, ನಿರಂತರವಾಗಿ ಹೆಲ್ಮೆಟ್ ಧರಿಸುವುದರಿಂದಲೇ ಕೂದಲು ಉದುರುತ್ತೆ ಎನ್ನುವುದು ಯಾವುದೇ ವೈದ್ಯಕೀಯ ಪರೀಕ್ಷೆಯಲ್ಲೂ ಈವರೆಗೆ ದೃಢಪಟ್ಟಿಲ್ಲ. ಆದರೆ ಹೆಲ್ಮೆಟ್‌ಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಬೆವರುವಿಕೆ ಉಂಟಾಗುತ್ತದೆ. ಬೆವರುವಿಕೆ ಉಂಟಾದರೆ ಹೆಲ್ಮೆಟ್ ಸ್ವಚ್ಛವಾಗಿರುವುದಿಲ್ಲ. ಇದರಿಂದಾಗಿ ತಲೆಹೊಟ್ಟು ಉಂಟಾಗುತ್ತದೆ. ಹುಟ್ಟು ಕೂದಲು ಉದುರಲು ಮುಖ್ಯ ಕಾರಣವಾಗುತ್ತದೆ. ಅಲ್ಲದೇ ನಿರಂತರವಾಗಿ ಹೆಲ್ಮೆಟ್ ಹಾಕುವುದರಿಂದ ಕೂದಲಿನ ಮೂಲದಲ್ಲಿ ಎಳೆತ ಉಂಟಾಗುವುದರಿಂದ ಕೂದಲಿಗೆ ಸಮಸ್ಯೆಯಾಗುತ್ತದೆ. ನೀವು ತುಂಬ ಹೊತ್ತು ಹೆಲ್ಮೆಟ್ ಧರಿಸುವುದಾದರೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಒಳಿತು. ಅಂದರೆ ಕೂದಲನ್ನು ಸ್ವಚ್ಚವಾಗಿಟ್ಟುಕೊಳ್ಳಲು ಕೂದಲನ್ನು ನಿಯಮಿತವಾಗಿ ತೊಳೆಯುವುದು. ತೊಳೆಯಲು ಸಾವಯವ ಉತ್ಪನ್ನಗಳನ್ನು ಬಳಸುವುದು ಉತ್ತಮ ಐಡಿಯಾ. ಹಾಗೆಂದ ಮಾತ್ರಕ್ಕೆ ಇದು ಎಲ್ಲರಿಗೂ ಈ ರೀತಿಯ ಸಮಸ್ಯೆ ಕಾಡುವುದಿಲ್ಲ ಹೆಲ್ಮೆಟ್ ಧರಿಸುವ ಕೇವಲ 10% ಜನರಲ್ಲಿ ಈ ರೀತಿಯ ಸಮಸ್ಯೆ ಕಾಡಬಹುದು. ಕೆಲವರಿಗೆ ತಲೆ ಸಂಪೂರ್ಣ ಬೆವರಿದರೂ ಹುಟ್ಟು ಆಗುವುದಿಲ್ಲ ತಲೆ ಕೂದಲಿಗೆ ಯಾವುದೇ ಸಮಸ್ಯೆ ಬರುವುದಿಲ್ಲ.
ದ್ವಿಚಕ್ರ ವಾಹನ ಸವಾರರಿಗಾಗಿ ಸಲಹೆ ಏನು! ಸಾಮಾನ್ಯವಾಗಿ ಕೂದಲು ಉದುರುವಿಕೆ ಆಗುತ್ತಿರುವ ಜನರು ಅದಕ್ಕೆ ಮುಖ್ಯ ಕಾರಣ ಏನು ಎಂಬುವುದು ತಿಳಿಯಲು ಕೂದಲಿಗೆ ಸಂಬಂಧಪಟ್ಟ ವೈದ್ಯರನ್ನು ಭೇಟಿ ಮಾಡಬೇಕು. ಹೇರ್ ಸ್ಪೆಷಲಿಸ್ಟ್ ಅದಕ್ಕೆ ಬೇಕಾದ ಪರೀಕ್ಷೆಗಳನ್ನು ನಡೆಸಿ ಮೂಲ ಕಾರಣ ಏನು ಎಂದು ತಿಳಿಯುತ್ತಾರೆ. ಬಳಿಕ ಇದಕ್ಕೆ ಸಂಬಂಧಪಟ್ಟ ಚಿಕಿತ್ಸೆ ನಡೆಸಬಹುದಾಗಿದೆ. ಇನ್ನು ಹೆಲ್ಮೆಟ್ ಧರಿಸಿ ನಿಮಗೆ ಹೇರ್ ಫಾಲ್ ನಂತಹ ಸಮಸ್ಯೆ ಕಾಡುತ್ತಿದ್ದರೆ ಈ ಕೆಳಗಿನವುಗಳನ್ನು ಪಾಲಿಸುವುದು ಒಳ್ಳೆಯದು. 1.ಹೆಲ್ಮೆಟ್ ಧರಿಸುವಾಗ ನಿಮ್ಮ ಮುಂಭಾಗದ ಕೂದಲನ್ನು ಎಳೆದು ಹಿಂದಕ್ಕೆ ಇಡಬಾರದು 2. ಹೆಲ್ಮೆಟ್ ಸ್ವಚ್ಛವಾಗಿರಬೇಕು, ದುರ್ವಾಸನೆ ಬಂದರೆ ಕೂಡಲೆ ಸ್ವಚ್ಛಗೊಳಿಸಬೇಕು 3.ನಿಮ್ಮ ಕೂದಲನ್ನು ಆಗಾಗ್ಗೆ ತೊಳೆಯುತ್ತೀರಬೇಕು 4. ನಿಮ್ಮ ಕೂದಲಿಗೆ ಸೂಟ್ ಆಗುವ ಸೂಕ್ತ ಜೈವಿಕ ಉತ್ಪನ್ನಗಳನ್ನು ಕೂದಲು ಕೇರಿಂಗ್ ಗೆ ಬಳಸಬೇಕು 5. ತಲೆಗೆ ವಾರಕ್ಕೆ ಎರಡು ಬಾರಿ ಎಣ್ಣೆ ಮಸಾಜ್ ಮಾಡಬೇಕು 6.ತಲೆಯನ್ನು ಪ್ರತಿದಿನ ತೊಳೆದು ಸರಿಯಾಗಿ ಒಣಗಿಸಿ ನಂತರ ತಲೆ ಬಾಚಬೇಕು
ತಲೆಹೊಟ್ಟು ಸಮಸ್ಯೆಯಿದ್ದರೆ : ಇದಲ್ಲದೇ ಕೂದಲಿನಲ್ಲಿ ಡ್ಯಾಂಡ್ರಫ್ ಇದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಮೂಲಕ ಸರಿ ಮಾಡಿಸಿಕೊಳ್ಳಬೇಕು. ಯಾಕೆಂದರೆ ಕೂದಲು ಉದುರಲು ಡ್ಯಾಂಡ್ರಫ್ ಕೂಡ ಒಂದು ಕಾರಣ. ಎಲ್ಲದಕ್ಕೂ ಮುಖ್ಯವಾಗಿ ನೀವು ಹೆಲ್ಮೆಟ್ ಧರಿಸಿದರೆ ಪರವಾಗಿಲ್ಲ. ಆದರೆ ಸ್ವಚ್ಛತೆ ಕಾಪಾಡುವುದು, ಬೆವರು ಬಂದರೆ ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳುವುದು, ಹೆಚ್ಚು ಬೆವರುವವರು ಸುರಕ್ಷತಾ ದೃಷ್ಟಿಯಿಂದ ಬುರುಡೆ ಮೇಲೆ ಬಟ್ಟೆ ಹಾಕಿಕೊಂಡು ಹೆಲ್ಮೆಟ್ ಧರಿಸುವುದು ಉತ್ತಮ. ಹೆಲ್ಮೆಟ್ ಧರಿಸಿದರೆ ಹೇರ್ ಫಾಲ್ ಸಂಭವಿಸುವುದಿಲ್ಲ ಹೇರ್ ಫಾಲ್ ಇದ್ದವರು ಹೆಲ್ಮೆಟ್ ಧರಿಸಿದರೆ ಖಂಡಿತ ಆ ಸಮಸ್ಯೆ ಉಲ್ಬಣಿಸುತ್ತೆ ಅಷ್ಟೇ. ಅಲ್ಲದೇ ಈ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಹೆಲ್ಮೆಟ್ ನಿಂದ ಕೂದಲು ಉದುರುವುದೇ ಇಲ್ಲ. ಪುರುಷ ಆಗಲಿ ಮಹಿಳೆ ಆಗಲಿ ಕೂದಲು ಎಲ್ಲರಿಗೂ ಅಂದ. ಕೂದಲು ಮನುಷ್ಯನ ಅಂದವನ್ನು ಹೆಚ್ಚಿಸುತ್ತದೆ. ಹೀಗಾಗಿ ಕೂದಲಿನ ಬಗ್ಗೆ ಜಾಗರೂಕತೆಯಿಂದ ಇರುವುದು ಒಳ್ಳೆಯದು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ.