ಕಾಸರಗೋಡು: ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ರಾಜಕೀಯ ವಿರೋಧಿಗಳನ್ನು ದಮನಿಸಲು ಕ್ರೈಂ ಬ್ರಾಂಚನ್ನು ದುರುಪಯೋಗಪಡಿಸುತ್ತಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವಿಧಾನಸಭಾ ಚುನವಣೆಯಲ್ಲಿ ಮಂಜೇಶ್ವರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ನಂತರ ನಾಮಪತ್ರ ಹಿಂತೆಗೆದುಕೊಂಡ ಪ್ರಕರಣದಲ್ಲಿ ಸಿಪಿಎಂನ ಒತ್ತಡಕ್ಕೆ ಮಣಿದಿರುವ ಕ್ರೈಂ ಬ್ರಾಂಚ್ ನನ್ನ ಮೇಲೆ ಆರೋಪ ಹೊರಿಸುತ್ತ ಬಂದಿದೆ. ಆದರೆ ಒಂದು ವರ್ಷ ಕಳೆದರೂ, ಇದನ್ನು ಸಾಬೀತುಪಡಿಸಲು ಕ್ರೈಂ ಬ್ರಾಂಚ್‍ಗೆ ಸಾಧ್ಯವಾಗಿಲ್ಲ. ಅಲ್ಲದೆ ಎಸ್‍ಸಿ-ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಕಾನೂನುಬಾಹಿರವಾಗಿ ಕೇಸು ದಾಖಲಿಸಲಾಗಿದೆ.
ಚಿನ್ನ, ವಿದೇಶಿ ಕರೆನ್ಸಿ ಸಾಗಾಟ ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಆರೋಪ ಬಿಗುಗೊಳ್ಳುತ್ತಿದ್ದಂತೆ ಮತ್ತೆ ಕ್ರೈಂ ಬ್ರಾಂಚ್‍ನ್ನು ಬಳಸಿಕೊಂಡು ತನ್ನ ವಿರುದ್ಧ ಸಂಚು ರೂಪಿಸಲು ಸರ್ಕಾರ ಮುಂದಾಗಿದೆ. ಸುಳ್ಳು ಆರೋಪಗಳ ಮೂಲಕ ಸಾಮಾಜಿಕ ಹೋರಾಟ ದಮನಿಸಲು ಸಾಧ್ಯವಾಗದು. ಕ್ರೈಂ ಬ್ರಾಂಚ್ ಸಿಪಿಎಂನ ಆಜ್ಞಾನುವರ್ತಿಯಾಗುವುದರ ಬದಲು ಸ್ವತಂತ್ರವಾಗಿ ಕಾರ್ಯಪ್ರವೃತ್ತರಾಗಲು ಮುಂದಾಗುವಂತೆ ಸಲಹೆ ನೀಡಿದರು.