ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ ಪ್ರಯತ್ನಿಸುತ್ತಿದ್ದು ಏಕನಾಥ್ ಶಿಂಧೆ ಬಂಡಾಯ ಬಣವನ್ನು ತೆಕ್ಕೆಗೆ ಎಳೆದುಕೊಳ್ಳಲು ನೋಡುತ್ತಿದೆ ಎಂದು ತಿಳಿದುಬಂದಿದೆ.
ಇಂದು ಮತ್ತೆ ಮೂವರು ಶಾಸಕರು ಬಂಡಾಯ ಗುಂಪಿಗೆ: ಮಹಾ ವಿಕಾಸ ಅಘಾಡಿ(MVA) ಸರ್ಕಾರದ ಮೂವರು ಶಿವಸೇನೆ ಶಾಸಕರು ಅಸ್ಸಾಂನ ಗುವಾಹಟಿಗೆ ತೆರಳಿ ಸಚಿವ ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಗುಂಪನ್ನು ಸೇರಿಕೊಂಡಿದೆ.
ದೀಪಕ್ ಕೇಸಕರ್ (ಸಾವಂತವಾಡಿಯಿಂದ ಶಾಸಕ), ಮಂಗೇಶ್ ಕುಡಾಲ್ಕರ್ (ಚೆಂಬೂರ್) ಮತ್ತು ಸದಾ ಸರ್ವಾಂಕರ್ (ದಾದರ್) ಅವರು ಮುಂಬೈನಿಂದ ಗುವಾಹಟಿಗೆ ಬೆಳಿಗ್ಗೆ ವಿಮಾನದಲ್ಲಿ ತೆರಳಿದರು ಎಂದು ಶಿಂಧೆ ಅವರ ನಿಕಟವರ್ತಿ ಹೇಳಿದ್ದಾರೆ. ನಿನ್ನೆ ಸಂಜೆ ಮಹಾರಾಷ್ಟ್ರ ಸಚಿವ ಗುಲಾಬ್ರಾವ್ ಪಾಟೀಲ್ ಸೇರಿದಂತೆ ನಾಲ್ವರು ಶಾಸಕರು ಗುವಾಹಟಿಗೆ ತೆರಳಿದ್ದರು.
ಶಿಂಧೆ ಅವರು ಶಾಸಕರೊಂದಿಗೆ ಸಮಾಲೋಚಿಸಿ ನಂತರ ಮುಂಬೈಗೆ ಯಾವಾಗ ಮರಳಬೇಕು ಎಂದು ನಿರ್ಧರಿಸುತ್ತಾರೆ ಎಂದು ಅವರ ಸಹಚರರು ತಿಳಿಸಿದ್ದಾರೆ. ಇತ್ತ ತಂದೆ ಬಾಳಾಸಾಹೇಬ್ ಠಾಕ್ರೆ ಕಟ್ಟಿದ ಶಿವಸೇನೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಬಲ ಕುಗ್ಗುತ್ತದೆಯೇ ಎಂಬ ಸಂದೇಹ ಉಂಟಾಗುತ್ತಿದೆ. ಏಕನಾಥ್ ಶಿಂಧೆ ಬಲ ಮತ್ತಷ್ಟು ಹೆಚ್ಚುತ್ತಿದೆ.