ತಿರುವನಂತಪುರ: ತಿರುವನಂತಪುರದ ವಝುತಕಾಡ್ ಸರ್ಕಾರಿ ಎಲ್ ಪಿಎಸ್ ಕಾಟನ್ ಹಿಲ್ ಶಾಲೆಯಲ್ಲಿ ಮಧ್ಯಾಹ್ನದ ಊಟದ ಗುಣಮಟ್ಟ ಪರಿಶೀಲಿಸಲು ಬಂದ ಸಚಿವರಿಗೂ ನೈಜತೆಯ ಅರಿವಾಗಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಿ.ಆರ್.ಅನಿಲ್ ಅವರಿಗೆ ನೀಡಿದ ಆಹಾರದಲ್ಲಿ ಕೂದಲು ಪತ್ತೆಯಾಗಿದ್ದು, ಸಚಿವರ ಗಮನಕ್ಕೆ ಬಂದಿದೆ.
ಶಾಲಾ ಮಕ್ಕಳಿಗೆ ಆಹಾರ ವಿಷವಾಗುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಸಚಿವರು ಹಾಗೂ ಶಾಸಕರು ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನ ಶಾಲೆಗೆ ಆಗಮಿಸಿದ ಸಚಿವರನ್ನು ಮುಖ್ಯ ಶಿಕ್ಷಕರು ಬರಮಾಡಿಕೊಂಡರು. ವಸ್ತುಗಳನ್ನು ಇಡಲಾಗಿದ್ದ ಸ್ಟೋರ್ ರೂಂಗೆ ಸಚಿವರು ಭೇಟಿ ನೀಡಿದರು.
ಶಾಲೆಗಳಿಗೆ ಸರ್ಕಾರ ನೀಡುವ ಅಕ್ಕಿಯ ಗುಣಮಟ್ಟ ಮತ್ತು ಸರಕುಗಳ ಗುಣಮಟ್ಟದ ಕುರಿತು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಈ ಬಾರಿ ಸರ್ಕಾರ ಜೂ.2ರಂದು ಶಾಲೆಗಳಿಗೆ ಅಕ್ಕಿ ನೀಡಿದ್ದು, ಅಲ್ಲಿಯವರೆಗೆ ಎಲ್ಲ ದಾಸ್ತಾನು ಭರಿಸುವಂತೆ ಹೇಳಿರುವುದಾಗಿ ಸಚಿವರು ವಿವರಿಸಿದ್ದರು. ಇದಾದ ಬಳಿಕ ಸಚಿವರು ಮಕ್ಕಳು ಊಟ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದರು.
ಮಕ್ಕಳ ಬಳಿ ಮಾಹಿತಿ ಕೇಳಿ ಪಡೆದ ಸಚಿವರು ಊಟಕ್ಕೆ ಕುಳಿತರು. ಇದೇ ವೇಳೆ ಸಚಿವರಿಗೆ ನೀಡಿದ ಅನ್ನದಲ್ಲಿ ಕೂದಲು ಕಂಡುಬಂತು. ಕೂದಲನ್ನು ಕೈಯಿಂದ ಎತ್ತಿದ ಮಂತ್ರಿ ಮಹಾಶಯರು ತಮ್ಮ ಜೊತೆಯಲ್ಲಿದ್ದವರಿಗೆ ತೋರಿಸಿದರು. ಬಳಿಕ ಸಚಿವರಿಗೆ ಬೇರೆ ಊಟ ನೀಡಲಾಯಿತು.