ನವದೆಹಲಿ:ಸತತ ಎರಡನೇ ದಿನವಾದ ಗುರುವಾರ ಭಾರತೀಯ ರೂಪಾಯಿಯು ಅಮೆರಿಕದ ಡಾಲರ್‌ನೆದುರು 78.32ಕ್ಕೆ ಇಳಿಯುವ ಮೂಲಕ ಸಾರ್ವಕಾಲಿಕ ಕುಸಿತವನ್ನು ದಾಖಲಿಸಿದೆ. ಬುಧವಾರವೂ ಡಾಲರ್‌ನೆದುರು ರೂಪಾಯಿ ಇದೇ ಮಟ್ಟದಲ್ಲಿ ಅಂತ್ಯಗೊಂಡಿತ್ತು. ವಿದೇಶಿ ನಿಧಿಗಳ ಹೊರಹರಿವಿನ ನಡುವೆ ರೂಪಾಯಿ ವೌಲ್ಯ ದಾಖಲೆಯ ಕುಸಿತವನ್ನು ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಗುರುವಾರ ಬೆಳಿಗ್ಗೆ ರೂಪಾಯಿ 78.26ರಲ್ಲಿ ಆರಂಭಗೊಂಡಿತ್ತಾದರೂ ಬಳಿಕ ಕುಸಿಯುತ್ತ 78.32ರಲ್ಲಿ ಸ್ಥಿರಗೊಂಡಿತು.
ಬುಧವಾರ ಡಾಲರ್‌ನೆದುರು 19 ಪೈಸೆ ಕುಸಿಯುವ ಮೂಲಕ ರೂಪಾಯಿ ಸಾರ್ವಕಾಲಿಕ ಕನಿಷ್ಠ (78.32)ಕ್ಕೆ ಇಳಿದಿತ್ತು.
ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 95 ಡಾ.(ಸುಮಾರು 7,000 ರೂ)ಗಳ ಮೇಲೆ ಇರುವವರೆಗೆ ರೂಪಾಯಿಯ ದುರ್ಬಲತೆ ಮುಂದುವರಿಯಲಿದೆ. ಕಚ್ಚಾ ತೈಲದ ಬೆಲೆ 95 ಡಾ.ಗಿಂತ ಕೆಳಗಿಳಿದರೆ ಮತ್ತು ಬೆಲೆ ಇಳಿಕೆ ಸುಸ್ಥಿರವಾದರೆ ರೂಪಾಯಿ ಬಲಿಷ್ಠಗೊಳ್ಳಲಿದೆ ಎಂದು ಎಲ್‌ಕೆಪಿ ಸೆಕ್ಯೂರಿಟಿಸ್‌ನ ಜತಿನ್ ತ್ರಿವೇದಿ ಅಭಿಪ್ರಾಯಿಸಿದ್ದಾರೆ. ಈ ನಡುವೆ ಗುರುವಾರ ಬಾಂಬೆ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್ 443.19 (ಶೇ.0.86) ಅಂಕಗಳ ಗಳಿಕೆಯೊಂದಿಗೆ 52,265.72ರಲ್ಲಿ ಮುಕ್ತಾಯಗೊಂಡಿದ್ದರೆ,ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ 143.35 (ಶೇ.0.93) ಅಂಕಗಳ ಗಳಿಕೆಯೊಂದಿಗೆ 15,556.65ರಲ್ಲಿ ಅಂತ್ಯಗೊಂಡಿದೆ.