ಕುಂಬಳೆ: ಯಕ್ಷಗಾನ ವಾಲ್ಮೀಕಿ ಪಾರ್ತಿಸುಬ್ಬನ ನೆಲದ ಪ್ರಸಿದ್ಧ ಪ್ರಸಂಗಕರ್ತ, ಕವಿ ಶೇಡಿಗುಮ್ಮೆ ವಾಸುದೇವ ಭಟ್ ಅವರಿಗೆ 75 ತುಂಬಿದ ಹಿನ್ನೆಲೆಯಲ್ಲಿ 'ಕಣಿಪುರದ ವಜ್ರ ಸನ್ಮಾನ' ಮತ್ತು ದಾವಣಗೆರೆಯಲ್ಲಿ ಕನ್ನಡ ಕೈಂಕರ್ಯದೊಂದಿಗೆ ಯಕ್ಷಕಲಾಪೋಷಣೆ ಮಾಡುತ್ತಿರುವ ಸಾಂಸ್ಕøತಿಕ ಸೇನಾನಿ ಸಾಲಿಗ್ರಾಮ ಗಣೇಶ ಶೆಣೈ ಅವರಿಗೆ 'ದಾವಣಗೆರೆ ಯಕ್ಷರಾಯಭಾರಿ' ಬಿರುದಿನೊಂದಿಗೆ ಕುಂಬಳೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 'ಕಣಿಪುರ' ಯಕ್ಷಗಾನ ಮಾಸಪತ್ರಿಕೆ ನೇತೃತ್ವದಲ್ಲಿ ಸಂಪಾದಕ ಎಂ.ನಾ.ಚಂಬಲ್ತಿಮಾರ್ ಅವರ ನೂತನ ಮನೆ 'ಸಂಕೀರ್ತನ'ದ ಗೃಹಪ್ರವೇಶೋತ್ಸವ ಸಂದರ್ಭದಲ್ಲಿ ಹಮ್ಮಿಕೊಂಡ ಪಾರ್ತಿಸುಬ್ಬನ ಯಕ್ಷಕಾವ್ಯೋತ್ಸವದಲ್ಲಿ ಸಾಧಕರನ್ನು ಗೌರವಿಸಿ ಅಭಿನಂದಿಸಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸರಸಂಘ ಚಾಲಕ ಗೋಪಾಲ ಚೆಟ್ಟಿಯಾರ್, ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ, ಖ್ಯಾತ ಲೇಖಕ ಡಾ. ಮೋಹನ ಕುಂಟಾರ್, ಕಾಸರಗೋಡಿನ ಹಿರಿಯ ಸಂಗೀತಜ್ಞ ಕಲ್ಮಾಡಿ ಸದಾಶಿವ ಆಚಾರ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಮತ್ತು ಕಣಿಪುರದ ಎಂ.ನಾ. ಚಂಬಲ್ತಿಮಾರ್ ಸಮಕ್ಷಮದಲ್ಲಿ ಸನ್ಮಾನ ಮಾಡಲಾಯಿತು. ಪಾರ್ತಿಸುಬ್ಬನ ನೆಲದಲ್ಲಿ ಸನ್ಮಾನ ಪಡೆದುದಕ್ಕೆ ಕೃತಜ್ಞತೆ ಸಲ್ಲಿಸಿದ ದಾವಣಗೆರೆಯ ಕಲಾಕುಂಚದ ಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಮಾತನಾಡಿ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಕ್ಷಗಾನವನ್ನೂ ಒಳಪಡಿಸುವಂತೆ ಒತ್ತಾಯಿಸಲಾಗಿದೆ ಎಂದರು.
ಇದಕ್ಕೂ ಪೂರ್ವದಲ್ಲಿ ಪಾರ್ತಿಸುಬ್ಬನ ಪದ್ಯಗಳನ್ನಷ್ಟೇ ಹಾಡುವ ಯಕ್ಷಗಾನವೈಭವ ನಡೆಯಿತು. ಭಾಗವತರುಗಳಾದ ಪ್ರದೀಪ ಗಟ್ಟಿ, ಜಿ.ಕೆ. ನಾವಡ ಬಾಯಾರು, ಡಾ. ಸತೀಶ ಪುಣಿಂಚಿತ್ತಾಯ, ಸುಧೀಶ್ ಪಾಣಾಜೆ ಪಾರ್ತಿಸುಬ್ಬನ ಪದ್ಯಗಳನ್ನು ಹಾಡಿದರೆ ಚೆಂಡೆ-ಮದ್ಲೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಅನೂಪ್ ಸ್ವರ್ಗ, ಉದಯ ಕಂಬಾರ್ ಪಾಲ್ಗೊಂಡರು. ವೀಜಿ ಕಾಸರಗೋಡು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಅವಕಾಶಗಳೊಂದಿಗೆ ಪೀಠಿಕೆ ನುಡಿಸಿದ ಮತ್ತು ಮಂಗಲವಾದನಗೈದ ಬಾಲಪ್ರತಿಭೆಗಳಾದ ಮಾ. ಅದ್ವೈತ ಕನ್ಯಾನ ಮತ್ತು ಕೃಷ್ಣ ಚೈತನ್ಯ ಚೇರಾಲು ಜನಗಮನಸೆಳೆದರು. ಸಮಾರಂಭದಲ್ಲಿ ಸಾಮಾಜಿಕ, ಸಾಂಸ್ಕøತಿಕ ವಲಯದ ನೂರಾರು ಗಣ್ಯರು ಪಾಲ್ಗೊಂಡರು.