ಪೆರ್ಲ: ರಾಜ್ಯ ಸರ್ಕಾರವು 2022-23 ರ ಆರ್ಥಿಕ ವರ್ಷವನ್ನು ಉದ್ಯಮಶೀಲತೆ ವರ್ಷವೆಂದು ಘೋಷಿಸಿ ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಗಳ ಸಹಯೋಗದಲ್ಲಿ 2022-23ನೇ ಆರ್ಥಿಕ ವರ್ಷದಲ್ಲಿ ಒಂದು ಲಕ್ಷ ಉದ್ದಿಮೆಗಳನ್ನು ಆರಂಭಿಸುವ ಮೂಲಕ ಮೂರರಿಂದ ನಾಲ್ಕು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಬೃಹತ್ ಯೋಜನೆಯನ್ನು ಹಮ್ಮಿಕೊಂಡಿದೆ.
ಇದರ ಅಂಗವಾಗಿ ಎಣ್ಮಕಜೆ ಪಂಚಾಯತಿ ಮಟ್ಟದ ಏಕದಿನ ಕಾರ್ಯಗಾರವು ಪಂಚಾಯತಿ ಸಭಾಂಗಣದಲ್ಲಿ ಜರಗಿತು. ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಅಧ್ಯಕ್ಷತೆ ವಹಿಸಿದ್ದರು. ಪಂ.ಸದಸ್ಯರಾದ ಶಶಿಧರ ಕಾಟುಕುಕ್ಕೆ, ರೂಪಾವಾಣಿ ಆರ್.ಭಟ್, ಮಹೇಶ್ ಭಟ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ಕೈಗಾರಿಕಾ ಇಲಾಖೆಯ ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು. ಉದ್ಯಮಿಗಳಾಗುವ ಆಸಕ್ತಿ ಹೊಂದಿರುವವರಿಗೆ ಅರಿವು ಮೂಡಿಸಿ ಉದ್ಯಮಗಳು ಪ್ರಾರಂಭಿಸುವುದರ ಕುರಿತು, ಯಾವುದೆಲ್ಲ ಪರವಾನಿಗೆ ಪಡೆಯಬೇಕು, ಪರವಾನಿಗೆ ಪಡೆಯುವುದು ಹೇಗೆ, ಉದ್ಯಮಿಗಳಿಗಾಗಿ ಹಣಕಾಸು ಸಂಸ್ಥೆಗಳು ಜಾರಿಗೊಳಿಸುವ ಯೋಜನೆಗಳು, ಬ್ಯಾಂಕ್ ಸಾಲಗಳು ಮತ್ತು ಸಾಲ ಪಡೆಯುವುದು ಹೇಗೆ ಎಂಬುದರ ಕುರಿತು ಕೈಗಾರಿಕಾ ಇಲಾಖೆಯ ಆಶೋಕ್ ತರಗತಿ ನಡೆಸಿದರು.