ಲಖನೌ: ಮದುವೆ ಮನೆಯು ಸ್ಮಶಾನವಾಗಿದ್ದು, ಮದುವೆಯಾಗಬೇಕಾದ ವರ ಜೈಲು ಪಾಲಾದ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ನಡೆದಿದೆ.
ಹೌದು ಮದುವೆ ಮೆರವಣಿಗೆ ವೇಳೆ ವರ ಖುಷಿಗೆ ಗುಂಡು ಹಾರಿಸಿದ್ದು, ಆ ಗುಂಡು ಆತನ ಸ್ನೇಹಿತನಿಗೆ ತಗುಲಿ ಸಾವನ್ನಪ್ಪಿದ್ದಾರೆ. ವರನನ್ನು ಮನೀಶ್ ಮಧೇಶಿಯಾ ಎಂದು ಹಾಗೂ ಮೃತ ಸ್ನೇಹಿತನನ್ನು ಬಾಬು ಲಾಲ್ ಯಾದವ್ ಎಂದು ಗುರುತಿಸಲಾಗಿದೆ.
ವರ ಮನೀಶ್ ಮಧೇಶಿಯಾ ರಥದಲ್ಲಿ ಮೆರವಣಿಗೆ ಹೋಗುತ್ತಿದ್ದಾಗ ಗುಂಡು ಹಾರಿಸಿದ್ದಾನೆ. ಆ ಗುಂಡು ಸ್ನೇಹಿತ ಬಾಬು ಲಾಲ್ ಯಾದವ್ ಅವರಿಗೆ ತಗುಲಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರ ಮತ್ತು ಮೃತ ಸ್ನೇಹಿತ ಯೋಧನಾಗಿದ್ದು, ಇವರಿಬ್ಬರು ಸ್ನೇಹಿತರು ಎಂದು ಸೋನ್ಭದ್ರಾ ಪೊಲೀಸ್ ವರಿಷ್ಠಾಧಿಕಾರಿ ಅಮರೇಂದ್ರ ಪ್ರತಾಪ್ ಸಿಂಗ್ ಖಚಿತಪಡಿಸಿದ್ದಾರೆ. ಗುಂಡು ಹಾರಿಸಿದ ತಕ್ಷಣ, ಯಾದವ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದರು ಎಂದು ಸಿಂಗ್ ಹೇಳಿದ್ದಾರೆ.
ಸ್ನೇಹಿತ ಬಾಬು ಲಾಲ್ ಕುಟುಂಬದವರು ಈ ಸಂಬಂಧ ವರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ವರನನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಗುಂಡಿನ ದಾಳಿಗೆ ಬಳಸಿದ್ದ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ.
ಮದುವೆ ಮತ್ತು ದೇಗುಲ ಸೇರಿದಂತೆ ಯಾವುದೇ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಲೈಸನ್ಸ್ ಪಡೆದ ಬಂದೂಕುಗಳಿದ್ದರೂ ಸಹ ಸಂಭ್ರಮದಿಂದ ಗುಂಡು ಹಾರಿಸುವುದು ಭಾರತದಲ್ಲಿ ಕ್ರಿಮಿನಲ್ ಅಪರಾಧವಾಗಿದೆ.